ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುತ್ತಿರುವ ‘ಮಂಗಳೂರು ಕಂಬಳ’ದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.
ಮಂಗಳೂರು ಕಂಬಳ ಫೈನಲ್‌ನಲ್ಲಿ ಈ ಹಿಂದಿನ ದಾಖಲೆ ಹಿಂದಿಕ್ಕಿದ 80 ಬಡಗುಬೆಟ್ಟು ಶಿಖಾ ಸಂದೀಪ್ ಶೆಟ್ಟಿ ಅವರ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಎಂಬ ಎರಡು ಕೋಣಗಳು 10.87 ಸೆಕೆಂಡ್‌ನಲ್ಲಿ ಗುರಿ ತಲುಪಿ ನೂತನ ದಾಖಲೆ ನಿರ್ಮಿಸಿದೆ. ಕೋಣಗಳನ್ನು ಹಿಡಿದು ಓಡಿದ ಮಾಸ್ತಿಕಟ್ಟೆ ಸ್ವರೂಪ್ ಅವರು ನೂತನ ದಾಖಲೆಗೆ ಮುನ್ನುಡಿ ಬರೆದಿದ್ದಾರೆ.

ಈ ಕೋಣಗಳು 125 ಮೀಟರ್ ಕರೆಯನ್ನು ಕೇವಲ 10.87 ಸೆಕೆಂಡ್ ಗಳಲ್ಲಿ ತಲುಪಿ ನೂತನ ದಾಖಲೆ ಬರೆದವು. ಅಂದರೆ 100 ಮೀಟರ್ ಓಟವನ್ನು 8.69 ಸೆಕೆಂಡ್ ಗಳಲ್ಲಿ ಓಡಿದವು. ಈ ಹಿಂದೆ 2021ರ ಕಕ್ಯಪದವು ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಕೋಣಗಳು 125 ಮೀಟರ್ ಓಟವನ್ನು 10.95 ಸೆಕೆಂಡ್ ಗಳಲ್ಲಿ (100 ಮೀಟರ್ ಗೆ 8.76 ಸೆ) ಕ್ರಮಿಸಿ ದಾಖಲೆ ಬರೆದಿದ್ದವು.

