March 18, 2026
Wednesday, March 18, 2026
spot_img

ಮಂಗಳೂರು ಲಿಟ್ ಫೆಸ್ಟ್‌ | ಭಯೋತ್ಪಾದನೆ ನಿಲ್ಲಲ್ಲ, ಪಾಕಿಸ್ತಾನಕ್ಕೆ ಇರಲಿದೆ ಅಮೆರಿಕಾ, ಚೀನಾದ ಬೆಂಬಲ: ಡಾ. ಶ್ರೀರಾಮ್

ಹೊಸದಿಗಂತ ವರದಿ, ಮಂಗಳೂರು:

‘ಭಯೋತ್ಪಾದನೆ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ಅದೆಷ್ಟೇ ಪ್ರಯತ್ನಪಟ್ಟರೂ, ಅದು ಮುಂದುವರೆಯುತ್ತಲೇ ಇರುತ್ತದೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೆರಿಕಾ ಮತ್ತು ಚೀನಾದ ಬೆಂಬಲವಿದೆ ಎಂದು ಪ್ರೊಫೆಸರ್ ಡಾ. ಶ್ರೀರಾಮ್ ಸುಂದರ್ ಚೌಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ, ದೇಶದ ಜಾಗತಿಕ ಸಂಬಂಧಗಳ ಕುರಿತಾಗಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರವನ್ನು ಇನ್ನಷ್ಟು ಮುಂದುವರೆಸಬೇಕಿತ್ತು, ಅರ್ಧಕ್ಕೆ ನಿಲ್ಲಿಸಬಾರದಾಗಿತ್ತು ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಉದ್ದೇಶ ಯುದ್ಧ ಮಾಡುವುದಾಗಿರಲಿಲ್ಲ ಎಂದರು.

ಭಯೋತ್ಪಾದನೆಗೆ ಉತ್ತರ ಕೊಡಬೇಕಿತ್ತು. ನಮ್ಮನ್ನು ಪ್ರಚೋದಿಸಿದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಬೇಕಿತ್ತು. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಆದರೂ ಭಯೋತ್ಪಾದಕ ಚಟುವಟಿಕೆಗಳು ಮತ್ತೆ ಮರುಕಳಿಸುತ್ತವೆ. ನಾವೆಷ್ಟೇ ತಡೆಯುವುದಕ್ಕೆ ಪ್ರಯತ್ನ ಮಾಡಿದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ರಕ್ತಪಾತಗಳು, ದುರಂತಗಳು ನಡೆಯುತ್ತವೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೆರಿಕಾ ಮತ್ತು ಚೀನಾದ ಬೆಂಬಲವಿದೆ ಎಂದರು.

‘ಬಲಿಷ್ಠ ದೇಶಗಳು ಒಂದು ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಎಂದ ಅವರು, ಕೆಲವು ವರ್ಷಗಳಿಂದಿತ್ತೀಚೆಗೆ ವ್ಯವಸ್ಥೆ ಕುಸಿಯುತ್ತಿರುವುದನ್ನು ನೋಡಬಹುದು. ರಷ್ಯಾ-ಉಕ್ರೇನ್ ಯುದ್ಧ ಮೂರು ವರ್ಷಗಳಿಂದ ನಡೆಯುತ್ತಿದೆ. ಅದರಿಂದ ಸಾಕಷ್ಟು ಪ್ರಾಣಹಾನಿಯಾಗಿದೆ. ಆದರೂ ಯುದ್ಧ ನಿಂತಿಲ್ಲ. ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಕದನವಾಯಿತು. ಈಗ ಅಮೆರಿಕಾ, ವೆನೆಜುವೆಲಾ ಮೇಲೆ ಬೇರೆ ರೀತಿಯಲ್ಲಿ ದಾಳಿ ಮಾಡಿದೆ. ಬಲಿಷ್ಠರು ಏನು ಮಾಡಿದರೂ ಸರಿ ಎನ್ನುವಂತಾಗಿದೆ. ಕಾಡಿನ ನೀತಿ ಜಾರಿಯಾಗುತ್ತಿದೆ. ದುರ್ಬಲರಿಗೆ ಯಾವುದೇ ಸುರಕ್ಷತೆ ಇಲ್ಲ ಎನ್ನುವಂತಾಗಿದೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಿವೆ. ಸಾಮ್ರಾಜ್ಯಶಾಹಿ ವರ್ತನೆ ಹೆಚ್ಚಾಗುತ್ತಿದೆ. ನಾವು ಇದೆಲ್ಲದರಿಂದ ದೂರ ಉಳಿದು ಅಭಿವೃದ್ಧಿಯತ್ತ ಗಮನಹರಿಸಬೇಕು. ಯುದ್ಧವನ್ನು ತಪ್ಪಿಸಿ, ನಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !