ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ ಬರೋಬ್ಬರಿ 43 ವರ್ಷಗಳು ತುಂಬಿವೆ. ವಿಶೇಷವೆಂದರೆ, ಅವರು ನಾಯಕ ನಟನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಕನ್ನಡ ಚಿತ್ರರಂಗದಲ್ಲಿ! 1983ರ ಜನವರಿ 7ರಂದು ಬಿಡುಗಡೆಯಾದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಸವಿನೆನಪುಗಳನ್ನು ಅನಿಲ್ ಕಪೂರ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಲೆಜೆಂಡರಿ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಇಳೆಯರಾಜ ಅವರ ಸಂಗೀತದ ಸ್ಪರ್ಶವಿತ್ತು. ಈ ಸಿನಿಮಾದ ‘ಓ ಪ್ರೇಮಿ..’ ಹಾಡಿನ ತುಣುಕನ್ನು ಹಂಚಿಕೊಂಡಿರುವ ಅನಿಲ್ ಕಪೂರ್, ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. “43 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಮೂಲಕ ನನ್ನ ವೃತ್ತಿಜೀವನ ಆರಂಭವಾಯಿತು. ಇಂದು ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಬೆಳೆದಿರುವುದು ಹೆಮ್ಮೆಯ ವಿಷಯ,” ಎಂದು ಅವರು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಪ್ರಸ್ತುತ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಒಯ್ದಿರುವ ನಟ ಯಶ್, ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅನಿಲ್ ಕಪೂರ್ ಸಲಾಂ ಎಂದಿದ್ದಾರೆ. ಕೆಜಿಎಫ್ ಮತ್ತು ಕಾಂತಾರ ಅಂತಹ ಚಿತ್ರಗಳು ಭಾರತೀಯ ಸಿನಿಮಾವನ್ನು ಮರುವ್ಯಾಖ್ಯಾನಿಸಿವೆ ಎಂದು ಹೊಗಳಿರುವ ಅವರು, ಕನ್ನಡ ಚಿತ್ರರಂಗದ ಜೊತೆಗಿನ ಒಡನಾಟ ಇಲ್ಲಿಗೇ ಮುಗಿಯುವುದಿಲ್ಲ ಎನ್ನುವ ಮೂಲಕ ಮತ್ತೆ ಕನ್ನಡದಲ್ಲಿ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

