ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ, ಮಣಿಪಾಲ್ ಫೌಂಡೇಶನ್ ಜೊತೆಗೂಡಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಕೀರ್ಣ ಪೀಡಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳ ಸಹಾಯ ಒದಗಿಸುವ ವಿಶೇಷ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯಡಿ, ಫೌಂಡೇಶನ್ ಹತ್ತು ಗಂಭೀರ ಮತ್ತು ಸಂಕೀರ್ಣವಾದ ಮಕ್ಕಳ ಶಸ್ತ್ರಚಿಕಿತ್ಸೆಗಳ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಿದೆ. ಇದರಿಂದ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೂ ವೈದ್ಯಕೀಯವಾಗಿ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಸಮಯಕ್ಕೆ ಸರಿಯಾದ ಜೀವ ರಕ್ಷಕ ಸೇವೆ ಲಭ್ಯವಾಗಲಿದೆ.
ಈ ಕಾರ್ಯಕ್ರಮದ ಮೊದಲ ಪ್ರಕರಣವಾಗಿ 8 ವರ್ಷದ ಸುಭಾಷ್‌ಗೆ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಫೌಂಡೇಶನ್‌ನ ಯೋಜನೆಯಡಿ ಸಂಪೂರ್ಣ ಉಚಿತವಾಗಿ ನೆರವೇರಿಸಿದ ಈ ಚಿಕಿತ್ಸೆ, ವೈದ್ಯಕೀಯ ತಜ್ಞತೆ ಮತ್ತು ಸಾಮಾಜಿಕ ಕಳಕಳಿಯ ಸಂಯೋಜನೆಯಿಂದ ಸಾಧಿಸಬಹುದಾದ ಪರಿಣಾಮಕಾರಿತ್ವಕ್ಕೆ ಉದಾಹರಣೆಯಾಗಿದೆ.
ಸುಭಾಷ್‌ನ ಬಾಲ್ಯ ನಿರಂತರ ಕೆಮ್ಮು, ಉಸಿರುಗಟ್ಟಿಕೆ, ಪುನರಾವರ್ತಿತ ಸೋಂಕುಗಳು ತೀವ್ರವಾದ ತೂಕ ಇಳಿಕೆ, ನಿದ್ರಾಹೀನತೆ, ಮತ್ತು ಸಮವಯಸ್ಕರೊಂದಿಗೆ ಆಟೋಟಗಳಲ್ಲಿ ಪಾಲ್ಗೊಳ್ಳಲು ಅಶಕ್ತತೆ ಮುಂತಾದ ತೊಂದರೆಗಳಿಂದ ತುಂಬಿತ್ತು. ಜನ್ಮಜಾತವಾದ ಕೆಲವು ದೋಷಗಳು ವರ್ಷಗಳ ಕಾಲ ಗಮನಕ್ಕೆ ಬರದೇ, ಹಲವು ಆಸ್ಪತ್ರೆಗಳಲ್ಲಿ ಸರಿಯಾದ ರೋಗ ನಿರ್ಣಯ ಆಗದೆ ಫಲಿತಾಂಶರಹಿತ ಚಿಕಿತ್ಸೆಗಳಿಂದ ಅವನ ಕಷ್ಟ ಹೆಚ್ಚುತ್ತಲೇ ಬಂದಿತು. ಕೋವಿಡ್ ಸಂದರ್ಭದಲ್ಲಿ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ದುಃಖವೂ ಅವನ ಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿತು.
ಅವನು ಟ್ರಾಕಿಯೋ–ಈಸೋಫೇಜಿಯಲ್ ಫಿಸ್ಚುಲಾ (TEF) ಎಂಬ ಅಪರೂಪದ ಜನ್ಮಜಾತ ದೋಷದೊಂದಿಗೆ ಜನಿಸಿದ್ದನು. ಸಹಜ ವಾಕ್ಯದಲ್ಲಿ, ಅನ್ನನಾಳ ಮತ್ತು ಶ್ವಾಸನಾಳದ ಮಧ್ಯೆ ಅಸಹಜ ಸಂಪರ್ಕದ ಬೆಳವಣಿಗೆಯನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಾಕಿಯೋ–ಈಸೋಫೇಜಿಯಲ್ ಫಿಸ್ಚುಲಾ (TEF) ಎನ್ನಲಾಗುತ್ತದೆ. ಜನನದ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೂ, ಈ ಬೆಳವಣಿಗೆಯು ಸಂಪೂರ್ಣವಾಗಿ ನಿರ್ಮೂಲವಾಗದೆ, ವರ್ಷಗಳ ಕಾಲ ಮರುಕಳಿಸುತ್ತಾ ಬಂದಿತು. ದ್ರವ ಆಹಾರವು ಪ್ರತಿ ಬಾರಿ ಶ್ವಾಸಕೋಶಕ್ಕೆ ಸೇರುತ್ತಿದ್ದರಿಂದ, ಸೋಂಕುಗಳು ಮರುಕಳಿಸಿ ಅವನ ಎಡ ಶ್ವಾಸಕೋಶದ (lung) ಭಾಗವನ್ನು ಹಾನಿಗೊಳಿಸಿತು.
ಸೆಪ್ಟೆಂಬರ್ 2025ರಲ್ಲಿ ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ ತಲುಪಿದಾಗ, ಅವನಿಗೆ ಗಂಭೀರ ಬ್ರಾಂಕಿಯೆಕ್ಟಾಸಿಸ್, ಶ್ವಾಸಕೋಶ ಕುಸಿತ ಮತ್ತು ಒಳಾಂಗಾಂಗಗಳ ಸ್ಥಳಾಂತರ ಕೂಡ ಕಾಣಿಸಿಕೊಂಡಿತು. 8 ವರ್ಷವಾದರೂ ಕೇವಲ 15 ಕೆ.ಜಿ. ತೂಕದ ಸುಭಾಷ್ ನಿರಂತರ ಆರೋಗ್ಯ ಸಂಕಷ್ಟದ ಅಂಚಿನಲ್ಲಿದ್ದ.
ಪೀಡಿಯಾಟ್ರಿಕ್ ಮತ್ತು ನವಜಾತ ಶಸ್ತ್ರಚಿಕಿತ್ಸಕ ಡಾ. ಕೌಶಿಕ್ ಹೆರ್ಲೆ ಅವರು ಸುಭಾಷ್‌ಗೆ ವಿವರವಾದ ಮೌಲ್ಯಮಾಪನ ನಡೆಸಿ, ಶಸ್ತ್ರಚಿಕಿತ್ಸೆಗೆ ಮುನ್ನ ಅವನ ದೇಹವನ್ನು ಸಜ್ಜುಗೊಳಿಸುವುದು ಅತ್ಯವಶ್ಯಕವೆಂದು ತೀರ್ಮಾನಿಸಿದರು. ದ್ರವ ಆಹಾರವು ಪ್ರತಿ ಬಾರಿ ಶ್ವಾಸಕೋಶಕ್ಕೆ ಸೇರುತ್ತಿದ್ದರಿಂದ ಅವನನ್ನು ಟ್ಯೂಬ್ ಫೀಡಿಂಗ್‌ಗೆ ವರ್ಗಾಯಿಸಲಾಯಿತು. ಹೆಚ್ಚಿನ ಪ್ರೋಟೀನ್ ಪೋಷಣಾ ಆಹಾರ, ಎದೆಗೂಡಿನ ಫಿಸಿಯೊಥೆರಪಿ ಸೇರಿದಂತೆ ಸಮಗ್ರ ಬಹುಶಿಸ್ತೀಯ ವೈದ್ಯಕೀಯ ಆರೈಕೆಯಿಂದ, ಹಲವು ವರ್ಷಗಳಿಂದ ತೂಕ ಹೆಚ್ಚಿಸದಿದ್ದ ಅವನು ಎರಡು ತಿಂಗಳಲ್ಲಿ 3 ಕೆ.ಜಿ. ತೂಕ ಹೆಚ್ಚಿಸಿಕೊಂಡನು.
ನವೆಂಬರ್ 19, 2025ರಂದು, ಡಾ. ಹೆರ್ಲೆ ಅವರ ನೇತೃತ್ವದಲ್ಲಿ, ಡಾ. ಧೀರಜ್ ಬಾಲಾಜಿ, ಲೀಡ್ ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ ಸರ್ಜರಿ ಮತ್ತು ಪೀಡಿಯಾಟ್ರಿಕ್ ಮೂತ್ರಶಾಸ್ತ್ರ ಇವರ ಸಹಯೋಗ, ಪೀಡಿಯಾಟ್ರಿಕ್ ಅನಸ್ತೀಷಿಯಾ, PICU, ಗ್ಯಾಸ್ಟ್ರೋಎಂಟರಾಲಜಿ ಮತ್ತು ಕಾರ್ಡಿಯೊಥೋರಾಸಿಕ್ ತಂಡಗಳ ಸಹಯೋಗದಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಚಿಕಿತ್ಸೆಯಲ್ಲಿ ಬ್ರೋಂಕೋಸ್ಕೋಪಿ, ಬಲಭಾಗದ ಥೋರಾಕೋಟಮಿ, ಟ್ರಾಕಿಯಾ–ಈಸೋಫೇಗಸ್ ಪ್ರತ್ಯೇಕಣೆ ಮತ್ತು ಫಿಸ್ಚುಲಾ ಮುಚ್ಚುವಿಕೆಗೆ ಪ್ಲೂರಲ್ ಫ್ಲ್ಯಾಪ್ ಬಳಕೆ ಮಾಡಿ ಕಾರ್ಯ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಎರಡು ದಿನಗಳಲ್ಲಿ PICUಯಲ್ಲಿ ಸ್ಥಿರಗೊಂಡ ಸುಭಾಷ್ ಹಂತ ಹಂತವಾಗಿ ನಡೆದಾಡಲು ಮತ್ತು ಬಾಯಿಮೂಲಕ ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ. ಫಾಲೋ–ಅಪ್ ಪರೀಕ್ಷೆಯಲ್ಲಿ ದೋಷ ಸಂಪೂರ್ಣವಾಗಿ ಗುಣಮುಖವಾಗಿದೆ ಎಂದು ದೃಢಪಟ್ಟಿದ್ದು, ಹಲವು ವರ್ಷಗಳ ಬಳಿಕ ಅವನು ಕೆಮ್ಮಿಲ್ಲದೆ ಊಟ ಮಾಡಲು ಶಕ್ತನಾಗಿದ್ದ. ಹಲವು ವರ್ಷಗಳಿಂದ ಸುಭಾಷ್ ನ ಪಾಲನೆ ಪೋಷಣೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವನ ಅಜ್ಜನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
ಈ ಸಂಪೂರ್ಣ ಚಿಕಿತ್ಸೆಯನ್ನು ಮಣಿಪಾಲ್ ಫೌಂಡೇಶನ್‌ನ ಸಹಾಯದಿಂದ ಉಚಿತವಾಗಿ ನೆರವೇರಿಸಲಾಯಿತು. ಯೋಜನೆಯಡಿ, ಮುಂದಿನ ದಿನಗಳಲ್ಲಿ ಇನ್ನೂ ಒಂಬತ್ತು ಸಂಕೀರ್ಣ ಪೀಡಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳಿಗೆ ಫೌಂಡೇಶನ್ ಬೆಂಬಲ ಒದಗಿಸಲಿದೆ.
“ಮಕ್ಕಳಲ್ಲಿ ಪುನರಾವರ್ತಿತ ಸೋಂಕುಗಳು, ತೂಕ ಹೆಚ್ಚದಿರುವುದು, ವಾಂತಿ, ಉಸಿರಾಟದ ತೊಂದರೆ — ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬಾರದು. ಹಲವು ಜನ್ಮಜಾತ ದೋಷಗಳು ವರ್ಷಗಳ ಕಾಲ ಮೌನವಾಗಿಯೇ ಇರುತ್ತವೆ, ಆದರೆ ಅವುಗಳನ್ನು ಸಮಯಕ್ಕೆ ಪತ್ತೆ ಹಚ್ಚಿದರೆ ಚಿಕಿತ್ಸೆಯು ಸಾಧ್ಯ,” ಎಂದರು ಡಾ. ಕೌಶಿಕ್ ಹೆರ್ಲೆ.
ಸುಭಾಷ್‌ನ ಪ್ರಯಾಣವು ವೈದ್ಯಕೀಯ ನೈಪುಣ್ಯ, ಸುಧಾರಿತ ದೃಶ್ಯೀಕರಣ ಚಿಕಿತ್ಸೆ ತಂತ್ರಜ್ಞಾನ, ನಿಖರ ಶಸ್ತ್ರಚಿಕಿತ್ಸೆ ಮತ್ತು ಸಾಮಾಜಿಕ ಜವಾಬ್ದಾರಿ ಒಟ್ಟಾಗಿ, ಒಂದು ಮಗುವಿನ ಜೀವನವನ್ನು ಹೇಗೆ ಸಂಪೂರ್ಣವಾಗಿ ಬದಲಿಸಿಬಲ್ಲದು ಎಂಬುದಕ್ಕೆ ಉದಾಹರಣೆಯಾಗಿದೆ. ಈ ಯೋಜನೆಯ ಮೂಲಕ, ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ ಮತ್ತು ಮಣಿಪಾಲ್ ಫೌಂಡೇಶನ್ ಸಹಾನುಭೂತಿ ಮತ್ತು ಉತ್ತಮ ಗುಣಮಟ್ಟದ ಮಕ್ಕಳ ಆರೈಕೆಯ ಬಗ್ಗೆ ತಮ್ಮ ನಿಷ್ಠೆಯನ್ನು ಮತ್ತಷ್ಟು ದೃಢಪಡಿಸುತ್ತಿವೆ.

