Monday, November 24, 2025

ಇಂಡಿಯಾ ಗೇಟ್ ಪ್ರತಿಭಟನೆಯಲ್ಲಿ ಮಾವೋವಾದಿ ಹಿಡ್ಮಾ ಬೆಂಬಲ ಘೋಷಣೆ: ಪೊಲೀಸ್ ತನಿಖೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಇಂಡಿಯಾ ಗೇಟ್‌ನಲ್ಲಿ ಭಾನುವಾರ ಸಂಜೆ ನಡೆದ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಪರಿಸರ ಸಂರಕ್ಷಣೆಯ ಹೆಸರಿನಿಂದ ನಡೆದಿದ್ದ ಈ ಪ್ರತಿಭಟನೆಯಲ್ಲಿ ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಘೋಷಣೆಗಳು ಮತ್ತು ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲೂ ಕಳವಳಕ್ಕೆ ಕಾರಣವಾಗಿದೆ.

ಪ್ರತಿಭಟನಾಕಾರರ ಒಂದು ಗುಂಪು “ಮಾದ್ವಿ ಹಿಡ್ಮಾ ಚಿರಾಯುವಾಗಲಿ” ಎಂದು ಕೂಗಿ, “ಬಿರ್ಸಾ ಮುಂಡಾದಿಂದ ಮಾದ್ವಿ ಹಿಡ್ಮಾವರೆಗೆ – ನಮ್ಮ ಕಾಡುಗಳ ಹೋರಾಟ ಮುಂದುವರಿಯುತ್ತದೆ” ಎಂಬ ಪೋಸ್ಟರ್‌ಗಳನ್ನು ಹಿಡಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಎಎನ್‌ಐ ಹಂಚಿದ ವಿಡಿಯೋ ಆಧರಿಸಿ, ದೆಹಲಿ ಪೊಲೀಸರ ವಿಶೇಷ ತಂಡ ಈಗ ಈ ಘಟನೆಯಲ್ಲಿ ಭಾಗವಹಿಸಿದವರನ್ನು ಗುರುತಿಸಲು ಕ್ರಮ ಕೈಗೊಂಡಿದೆ. ಪೋಸ್ಟರ್‌ಗಳು ಹಿಡಿದವರು ಮತ್ತು ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಾಯು ಮಾಲಿನ್ಯದ ವಿರುದ್ಧ ನಾಗರಿಕರು ಸೇರಿಕೊಂಡಿದ್ದ ಪ್ರತಿಭಟನೆ, ಕೆಲವರ ಆಕ್ರಮಣಕಾರಿ ವರ್ತನೆಯಿಂದ ಗಲಭೆಗೆ ತಿರುಗಿತು. ಕೆಲ ಪ್ರತಿಭಟನಾಕಾರರು ಪೊಲೀಸರು ಮೇಲೆ ದಾಳಿ ಮಾಡಿದ ಪರಿಣಾಮ, ಮೂವರು–ನಾಲ್ವರು ಸಿಬ್ಬಂದಿಗೆ ಗಾಯಗಳಾಗಿದ್ದು, ಅವರು ಪ್ರಸ್ತುತ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!