Sunday, October 26, 2025

ಮದುವೆ ಮಕ್ಕಳಾಟವಲ್ಲ, ಹೊಂದಾಣಿಕೆ ಇರಲೇಬೇಕು: ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆ ಎಂಬುದು ಕೇವಲ ಮಕ್ಕಳಾಟವಲ್ಲ ಎಂದು ಒತ್ತಿ ಹೇಳಿರುವ ಹೈಕೋರ್ಟ್​, ವೈವಾಹಿಕ ಜೀವನದಲ್ಲಿ ಪತಿ – ಪತ್ನಿ ಒಬ್ಬರಿಗೊಬ್ಬರು ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ ಎಂದು ತಿಳಿಸಿದೆ.

ಪತ್ನಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್​​ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್​​ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಹಿಂದೂ ಧರ್ಮ ಮತ್ತು ಆಚರಣೆಗಳ ಪ್ರಕಾರ ಮದುವೆ ಎಂದರೆ ಪತಿ – ಪತ್ನಿಯ ನಡುವಿನ ಸಹಬಾಳ್ವೆ ಮಾತ್ರವಲ್ಲ. ಅದೊಂದು ಪವಿತ್ರ ಬಂಧ ಎಂಬುದಾಗಿದೆ. ದಂಪತಿಯು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಲ್ಲಿ ಪರಸ್ಪರ ಸಹಕರಿಸಬೇಕು ಎಂಬ ನಂಬಿಕೆಯ ಮೇಲೆ ಮದುವೆ ಮಾಡಲಾಗಿರುತ್ತದೆ. ಕೇವಲ ಆರೋಪ ಪ್ರತ್ಯಾರೋಪಗಳ ಮೂಲಕ ಈ ಪವಿತ್ರವಾದ ಬಂಧವನ್ನು ವಿಭಜಿಸಲು ಸಾಧ್ಯವಿಲ್ಲ.

ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಪೀಠ, ಮೇಲ್ಮನವಿದಾರರಿಗೆ ಪ್ರತಿವಾದಿಯವರು ಪತ್ನಿಗಿಂತಲೂ ಪ್ರಾಮಾಣಿಕ ಸೇವಕಿ ಅಗತ್ಯವಿತ್ತು, ಅಲ್ಲದೇ, ಪತಿಗೆ ವಿಧೇಯಿಯಾಗಿರಬೇಕು. ಪತಿ ಹೇಳಿದ್ದನ್ನು ಮಾತ್ರ ಮಾಡಬೇಕು. ಚಿನ್ನಾಭರಣಗಳನ್ನು ಧರಿಸಲು ಪತಿ ಅನುಮತಿ ಪಡೆಯಬೇಕಾಗಿತ್ತು. ಈ ಕಾರಣಗಳಿಂದ ಪತಿಯೊಂದಿಗೆ ಸುಖ ಜೀವನ ನಡೆಸುವುದಕ್ಕೆ ಸಾಧ್ಯವಾಗಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಈ ಪ್ರಕರಣದಲ್ಲಿ ಅರ್ಜಿದಾರರ ಪತಿ ರಾಜಿ ಮಾಡಿಕೊಳ್ಳುವುದು ಇಲ್ಲವೇ ಪತ್ನಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ಪರಿಣಾಮ ಪತ್ನಿಯೊಂದಿಗೆ ವೈವಾಹಿಕ ಸಂಬಂಧ ಮುಂದುವರಿಸಲು ಸಾಧ್ಯವಾಗಿಲ್ಲ. ಅರ್ಜಿದಾರರ ಸಮಸ್ಯೆಗಳು ಕ್ಷುಲ್ಲಕವಾಗಿದ್ದು, ಪರಸ್ಪರ ಚರ್ಚೆ ಮತ್ತು ಮಾತೂಕತೆಯಿಂದ ಬಗೆಹರಿಸಿಕೊಳ್ಳಬಹುದಾಗಿತ್ತು. ಸಣ್ಣ ಸಮಸ್ಯೆಗಳಿಗೂ ಪತ್ನಿಯ ವಿರುದ್ಧ ದೂರುವ ಮೂಲಕ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠ ಹೇಳಿದೆ.

error: Content is protected !!