January16, 2026
Friday, January 16, 2026
spot_img

9ನೇ ವಯಸ್ಸಿಗೆ ಮದುವೆ, 14ನೇ ವಯಸ್ಸಿನಲ್ಲಿ ತಾಯಿ! ‘ಭಾರತದ ಮೊದಲ ಮಹಿಳಾ ವೈದ್ಯೆ’ ಪಟ್ಟ ಗೆದ್ದುಕೊಂಡವಳ ಬದುಕೇ ರೋಚಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಇತಿಹಾಸದಲ್ಲಿ ಮಹಿಳಾ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ದಾರಿಯನ್ನು ತೆರೆಯುವ ಅಪರೂಪದ ಹೆಸರೊಂದು ಎಂದಿಗೂ ಅಳಿಸದಂತೆ ಉಳಿದಿದೆ. ಅದುವೇ ಆನಂದಿಬಾಯಿ ಗೋಪಾಲರಾವ್ ಜೋಶಿ. 19ನೇ ಶತಮಾನದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಕನಸಾಗಿದ್ದ ಕಾಲದಲ್ಲಿ, ಸಮಾಜದ ವಿರೋಧ, ಕಠಿಣ ಪರಿಸ್ಥಿತಿಗಳು ಹಾಗೂ ಅಸಹ್ಯ ನಿಂದನೆಗಳ ನಡುವೆಯೇ ಅವರು ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆನಂದಿಬಾಯಿ ಜೋಶಿ 1865ರಲ್ಲಿ ಮಹಾರಾಷ್ಟ್ರದ ಖೇಡಾ ಜಿಲ್ಲೆಯಲ್ಲಿ ಜನಿಸಿದರು. ಕೇವಲ 9ನೇ ವಯಸ್ಸಿನಲ್ಲೇ ಗೋಪಾಲರಾವ್ ಜೋಶಿ ಎಂಬ ಸಾಮಾಜಿಕ ಸುಧಾರಕನನ್ನು ವಿವಾಹವಾಗಿದರು. 14ನೇ ವಯಸ್ಸಿನಲ್ಲಿ, ಆನಂದೀ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ, ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದ ಕಾರಣ, ಆ ಶಿಶು ಕೇವಲ ಹತ್ತು ದಿನಗಳಲ್ಲಿ ತೀರಿಕೊಂಡಿತು. ಈ ಘಟನೆ ಅವರ ಜೀವನದ ತಿರುವಾಯಿತು. ವೈದ್ಯೆಯಾಗುವ ತೀರ್ಮಾನಕ್ಕೆ ಸ್ಪೂರ್ತಿ ನೀಡಿತು.

ಶಿಕ್ಷಣಕ್ಕಾಗಿ ಹೋರಾಟ:
ಆ ಕಾಲದಲ್ಲಿ ಮಹಿಳೆಯರು ವಿದ್ಯಾಭ್ಯಾಸ ಮಾಡುವುದು ವಿರಳವಾಗಿತ್ತು. ಆದರೆ ಗೋಪಾಲರಾವ್ ಅವರ ಪ್ರೇರಣೆಯಿಂದ, ಆನಂದಿಬಾಯಿ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳುವ ನಿರ್ಧಾರ ಕೈಗೊಂಡರು. ಸಮಾಜದ ವಿರೋಧ, ಕಠಿಣ ಆರ್ಥಿಕ ಸ್ಥಿತಿ ಹಾಗೂ ಮಹಿಳೆಯರ ವಿರುದ್ಧದ ನಿಂದನೆಗಳ ನಡುವೆಯೂ ಅವರು ಹೋರಾಟ ಮುಂದುವರಿಸಿದರು. ಈ ವಿರೋಧಕ್ಕೆ ಪ್ರತಿಕ್ರಿಯೆಯಾಗಿ, ಆನಂದಿ ಸೆರಂಪೂರ್ ಕಾಲೇಜ್ ಹಾಲ್‌ನಲ್ಲಿ ಭಾಷಣ ನೀಡಿ, ಹಿಂದೂ ಮಹಿಳೆಯರಿಗೆ ಸೇವೆ ಸಲ್ಲಿಸಲು ತರಬೇತಿ ಪಡೆದ ಮಹಿಳಾ ವೈದ್ಯರ ಅಗತ್ಯವನ್ನು ಒತ್ತಿ ಹೇಳಿದರು.

1883ರಲ್ಲಿ ಅಮೆರಿಕಾದ Woman’s Medical College of Pennsylvania ಯಲ್ಲಿ ಅವರು ವೈದ್ಯಕೀಯ ಪದವಿ ಅಧ್ಯಯನ ಆರಂಭಿಸಿದರು. 1886ರಲ್ಲಿ 21ನೇ ವಯಸ್ಸಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದ ಅವರು ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಇತಿಹಾಸ ನಿರ್ಮಿಸಿದರು.

ಹೋರಾಟ ಮತ್ತು ತ್ಯಾಗ:
ಅಮೆರಿಕಾದ ತೀವ್ರ ಚಳಿ, ಆಹಾರ ಮತ್ತು ಭಾಷಾ ಅಡೆತಡೆಗಳ ನಡುವೆಯೂ ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ. ಆದರೆ ಅತಿಯಾದ ಶ್ರಮ ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ಪದವಿ ಪಡೆದ ಕೆಲವು ತಿಂಗಳಲ್ಲೇ ಕ್ಷಯರೋಗಕ್ಕೆ ಒಳಗಾಗಿ ನಿಧನರಾದರು. ಅವರ ವಯಸ್ಸು ಆಗ ಕೇವಲ 22 ವರ್ಷ.

ಅವರ ಜೀವನ ಚಿಕ್ಕದಾದರೂ ಅದ್ಭುತವಾದ ಹಾದಿಯಾಗಿದೆ. ಅವರು ಭಾರತದಲ್ಲಿ ಮಹಿಳಾ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾರಿ ತೆರೆದರು. ಇಂದಿಗೂ ಅನೇಕ ಮಹಿಳೆಯರು ಅವರ ಧೈರ್ಯದಿಂದ ಪ್ರೇರಣೆ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿದ್ದಾರೆ.

Must Read

error: Content is protected !!