ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ನಡೆದ ನಗರ್ತಪೇಟೆಯ ಭೀಕರ ಅಗ್ನಿ ದುರಂತದ ನೆನಪು ಇನ್ನೂ ಮಾಸುವ ಮುನ್ನವೇ, ಮತ್ತೆ ನಗರ ಹೊರವಲಯದಲ್ಲಿ ಭಾರೀ ಬೆಂಕಿ ಅವಘಡ ನಡೆದಿದೆ. ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿರುವ ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಆಯಿಲ್ ಉತ್ಪಾದನಾ ಕಾರ್ಖಾನೆಯಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲಿ ಕಾರ್ಖಾನೆಯ ಆವರಣವೇ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿತು. ಕಾರ್ಖಾನೆಯೊಳಗೆ ಸಂಗ್ರಹಿಸಿದ್ದ ಆಯಿಲ್ ಬ್ಯಾರಲ್‌ಗಳು ಬೆಂಕಿಗೆ ಆಹುತಿಯಾಗಿದ್ದು, ನೂರಾರು ಮೀಟರ್ ದೂರದಿಂದಲೂ ದಟ್ಟ ಹೊಗೆ ಗೋಚರಿಸಿತು.
ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪುತ್ತಿದ್ದಂತೆಯೇ ಆನೇಕಲ್‌ನಿಂದ ಆರಂಭಿಸಿ ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು ಮತ್ತು ಜಯನಗರದಿಂದ ಹತ್ತುಕ್ಕಿಂತ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವ ಕಾರ್ಯಾಚರಣೆ ಆರಂಭಿಸಿದವು. ಐದು ಗಂಟೆಗಳಿಗೂ ಹೆಚ್ಚು ಕಾಲ ನಿರಂತರ ಶ್ರಮ ಪಟ್ಟ ಬಳಿಕವೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಲಕ್ಷಾಂತರ ರೂಪಾಯಿಗಳ ಮೌಲ್ಯದ ಆಯಿಲ್ ಬ್ಯಾರಲ್‌ಗಳು ಮತ್ತು ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಾಮಾನ್ಯವಾಗಿ ಕಾರ್ಖಾನೆಯಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಆದರೆ ಭಾನುವಾರ ರಜೆ ಇದ್ದುದರಿಂದ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಆರ್ಥಿಕ ನಷ್ಟವು ಭಾರೀ ಪ್ರಮಾಣದಲ್ಲಿ ಉಂಟಾಗಿದೆ.
ಸ್ಥಳೀಯರು ಸಹ ಅಗ್ನಿಶಾಮಕ ದಳದ ಸಿಬ್ಬಂದಿಗೆ ನೆರವಾಗಿ ಬೆಂಕಿ ನಿಯಂತ್ರಣ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಈ ಅವಘಡ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.