ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಿಗರಿಂದ ತುಂಬಿಕೊಂಡಿರುವ ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಭಾರೀ ಅಗ್ನಿ ಅವಘಡ ಸಂಭವಿಸಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಡರಾತ್ರಿ ಉಂಟಾದ ಬೆಂಕಿಯಿಂದಾಗಿ ಅಲ್ಲಿದ್ದ 8ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಅಗ್ನಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಅಂಗಡಿಗಳಲ್ಲಿದ್ದ ಮೂರಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸಿಲಿಂಡರ್ ಸ್ಫೋಟದ ಶಬ್ದದಿಂದ ಸ್ಥಳೀಯರು ಬೆಚ್ಚಿಬಿದ್ದು ಹೊರಗೆ ಓಡಿಬಂದಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಸಾಕಷ್ಟು ಸಮಯದ ಪರಿಶ್ರಮದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ: FOOD | ಸಿಂಪಲ್ ಟೊಮೆಟೊ ಬಾತ್ ರೆಸಿಪಿ ಒಮ್ಮೆ ಟ್ರೈ ಮಾಡಿ!
ಅಗ್ನಿ ಅವಘಡದ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಉಂಟಾಗಿರಬಹುದು ಅಥವಾ ಕಿಡಿಗೇಡಿಗಳ ಕೃತ್ಯವಿರಬಹುದೆಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

