Monday, September 1, 2025

ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ: ತಂದೆ-ಮಗಳು ಸೇರಿ ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಮಾಚಲ ಪ್ರದೇಶದ ಎರಡು ಪ್ರತ್ಯೇಕ ಭೂಕುಸಿತಗಳಲ್ಲಿ ತಂದೆ – ಮಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಶಿಮ್ಲಾ ನಗರದ ಹೊರವಲಯದಲ್ಲಿರುವ ಜುಂಗಾದ ಡಬ್ಲೂ ಪ್ರದೇಶದ ವೀರೇಂದ್ರ ಕುಮಾರ್ ಮತ್ತು ಅವರ ಹತ್ತು ವರ್ಷದ ಪುತ್ರಿ ಮೃತರು. ಮನೆಯ ಹೊರಗಿದ್ದಿದ್ದರಿಂದ ವೀರೇಂದ್ರ ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೊಂದೆಡೆ, ಶಿಮ್ಲಾದ ಕೋಟ್‌ಖೈ ಪ್ರದೇಶದ ಚೋಲ್ ಗ್ರಾಮದಲ್ಲಿ ಸೋಮವಾರ ಮುಂಜಾನೆ ಮನೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಕಲಾವತಿ ಮೃತ ವೃದ್ಧೆ ಎಂದು ಗುರುತಿಸಲಾಗಿದ್ದು, ಅವರ ಮೃತದೇಹವನ್ನು ಅವಶೇಷಗಳಿಂದ ಹೊರ ತೆಗೆಯಲಾಗಿದೆ.

ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದ ಡಯಲ್ ಮೋರಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಭೂಕುಸಿತ ಸಂಭವಿಸಿದ ನಂತರ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದು, ನಾಲ್ಕು ಕುಟುಂಬಗಳ ಹತ್ತು ಜನರನ್ನು ಸ್ಥಳಾಂತರಿಸಲಾಗಿದೆ.

“ಮೂರು ಮನೆಗಳಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು. ಭೂಕುಸಿತದಿಂದ ಎರಡು ದನದ ಕೊಟ್ಟಿಗೆಗಳು ಮತ್ತು ಅಕ್ಕಪಕ್ಕದ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ರಕ್ಷಣೆ ಕಾರ್ಯಾಚರಣೆ ನಡೆಸಿ ಕುಲದೀಪ್, ಸಂದೀಪ್, ಪ್ರದೀಪ್ ಮತ್ತು ಸೋನ್ಫು ರಾಮ್ ಅವರ ಕುಟುಂಬಗಳನ್ನು ಅದೇ ಗ್ರಾಮದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ” ಎಂದು ರೋಹ್ರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ರಮೇಶ್ ಧಮೋತ್ರ ತಿಳಿಸಿದರು.

ಶಿಕ್ಡಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಾಜ್ಯ ರಾಜಧಾನಿಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಭೂಕುಸಿತಗಳಿಂದ ವಿದ್ಯುತ್ ಸಂರ್ಪಕ ಕಡಿತವಾಗಿದೆ ಮತ್ತು ನೀರು ಸರಬರಾಜಿಗೆ ಅಡಚಣೆಯಾಗಿದೆ.

ಇದನ್ನೂ ಓದಿ