ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶ ಮತ್ತೆ ಭೀಕರ ದುರಂತವನ್ನು ಅನುಭವಿಸಿದೆ. ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದ ಪರಿಣಾಮ ಇಡೀ ಹಳ್ಳಿ ನೆಲಸಮಗೊಂಡಿದ್ದು, 1,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮರಣಮೇಳದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿದೆ. ನಿರಂತರ ಮಳೆ ಬೆನ್ನಲ್ಲೇ ಈ ಭೀಕರ ಅವಘಡ ಸಂಭವಿಸಿದೆ.
ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದ ತಾರಾಸಿನ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಮಣ್ಣು ಮತ್ತು ಬಂಡೆಗಳು ಕುಸಿದುಬಿದ್ದು ಹಳ್ಳಿಯನ್ನೇ ಮುಚ್ಚಿಹಾಕಿವೆ. ಸುಡಾನ್ ಲಿಬರೇಶನ್ ಮೂವ್‌ಮೆಂಟ್/ಆರ್ಮಿ (SLM) ನೀಡಿರುವ ಮಾಹಿತಿಯ ಪ್ರಕಾರ, ಹಳ್ಳಿಯಲ್ಲಿದ್ದ ನೂರಾರು ಮನೆಗಳು ನಾಶವಾಗಿದ್ದು, ಹಳ್ಳಿಯ ಎಲ್ಲಾ ಜನರು ಭೂ ಸಮಾಧಿಯಾಗಿದ್ದಾರೆ.
ಈ ದುರಂತದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಕೇವಲ ಒಬ್ಬನೇ ಬದುಕುಳಿದಿರುವುದಾಗಿ ವರದಿಯಾಗಿದೆ. ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕ ಮೃತದೇಹಗಳು ಹೂತುಹೋಗಿರುವ ಶಂಕೆ ವ್ಯಕ್ತವಾಗಿದೆ. ಸಹಾಯಕ್ಕಾಗಿ ವಿಶ್ವಸಂಸ್ಥೆ ಮತ್ತು ಮಾನವೀಯ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.
ಸುಡಾನ್‌ನ ಅಂತರ್ಯುದ್ಧದ ನಡುವೆ ಮತ್ತೊಂದು ದುರಂತ:
ಸುಡಾನ್ ಈಗಾಗಲೇ ಸೈನ್ಯ ಮತ್ತು ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ನಡೆಯುತ್ತಿರುವ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದೆ. 2023ರಲ್ಲಿ ಆರಂಭವಾದ ಈ ಸಂಘರ್ಷದಲ್ಲಿ 4,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಜನರು ಆಹಾರ-ನೀರುಗಳ ಕೊರತೆಯಿಂದ ನರಳುತ್ತಿದ್ದು, ಕೆಲವರು ಬದುಕುಳಿಯಲು ಹುಲ್ಲು ತಿನ್ನುವ ಸ್ಥಿತಿಯಲ್ಲಿದ್ದಾರೆ.
ಪಶ್ಚಿಮ ಡಾರ್ಫರ್‌ನಲ್ಲಿ ನಡೆದ ಈ ಭೂಕುಸಿತ, ಸುಡಾನ್ ದೇಶದ ಜನರ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಯುದ್ಧದ ಮಧ್ಯೆ ಸಿಲುಕಿಕೊಂಡಿರುವ ಈ ದೇಶ ಈಗ ಪ್ರಕೃತಿ ವಿಕೋಪಕ್ಕೂ ತುತ್ತಾಗಿದ್ದು, ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ತುರ್ತು ನೆರವು ಮತ್ತು ಅಂತಾರಾಷ್ಟ್ರೀಯ ಸಮುದಾಯದ ತಕ್ಷಣದ ಸಹಾಯವೇ ಇಂತಹ ದುರಂತದಲ್ಲಿ ಬದುಕುಳಿದವರಿಗೆ ಆಶಾಕಿರಣವಾಗಬಹುದು.