ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ದಕ್ಷಿಣ ಭಾಗದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 14 ಸಶಸ್ತ್ರ ನಕ್ಸಲೀಯರು ಮೃತಪಟ್ಟಿದ್ದಾರೆ. ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಇಂದು ಮುಂಜಾನೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳು ಈ ವರ್ಷದ ಮೊದಲ ದೊಡ್ಡ ಯಶಸ್ವಿ ಕಾರ್ಯಾಚರಣೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲೀಯರ ಹಾಜರಾತಿ ಕುರಿತು ಖಚಿತ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಜಿಲ್ಲಾ ಮೀಸಲು ಪಡೆಗಳ (DRG) ತಂಡಗಳು ಬೆಳಗ್ಗೆಯೇ ಶೋಧ ಕಾರ್ಯಾಚರಣೆ ಆರಂಭಿಸಿವೆ. ರಾಯಪುರದಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಬಿಜಾಪುರ ಜಿಲ್ಲೆಯ ಬಸಗುಡ–ಟಾರೆಮ್ ಅರಣ್ಯ ಪ್ರದೇಶ ಹಾಗೂ ಸುಕ್ಮಾ ಜಿಲ್ಲೆಯ ಕೊಂಟಾ–ಕಿಸ್ತಾರಾಮ್ ಅರಣ್ಯದಲ್ಲಿ ಕಾರ್ಯಾಚರಣೆ ನಡೆಯುವ ವೇಳೆ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭದ್ರತಾ ಪಡೆಗಳು ತಕ್ಕ ಪ್ರತಿಕ್ರಿಯೆ ನೀಡಿವೆ.
ಇದನ್ನೂ ಓದಿ:
ದೀರ್ಘ ಕಾಲ ನಡೆದ ಗುಂಡಿನ ಚಕಮಕಿಯ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸುಕ್ಮಾ ಜಿಲ್ಲೆಯಲ್ಲಿ 12 ಹಾಗೂ ಬಿಜಾಪುರ ಜಿಲ್ಲೆಯಲ್ಲಿ 2 ನಕ್ಸಲೀಯರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳಗಳಿಂದ ಎಕೆ–47, ಇನ್ಸಾಸ್ ಅಸಾಲ್ಟ್ ರೈಫಲ್, ಸ್ವಯಂ ಲೋಡಿಂಗ್ ರೈಫಲ್ ಸೇರಿದಂತೆ ಹಲವು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಬಳಿಕ ಅರಣ್ಯ ಪ್ರದೇಶಗಳಲ್ಲಿ ಇನ್ನೂ ಶೋಧ ಕಾರ್ಯ ಮುಂದುವರಿದಿದ್ದು, ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

