ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜಲಾಶಯಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರ, 50 ವರ್ಷಕ್ಕೂ ಹಳೆಯದಾದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಿಸಲು ನಿರ್ಧರಿಸಿದೆ. ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈ ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಮೂಲದ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ.
ಈಗಾಗಲೇ ಮೆಟೀರಿಯಲ್‌ಗಳು ಸ್ಥಳಕ್ಕೆ ಬಂದಿದ್ದು, ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಬರುವ ಮೇ ತಿಂಗಳೊಳಗೆ 6 ಗೇಟ್‌ಗಳನ್ನು ಬದಲಾಯಿಸುವ ಗುರಿ ಹೊಂದಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಬೇಕಿರುವುದರಿಂದ, ಸಮನ್ವಯದೊಂದಿಗೆ ಕೆಲಸ ಮಾಡಲಾಗುವುದು ಎಂದು ಡಿ.ಕೆ.ಶಿ ತಿಳಿಸಿದ್ದಾರೆ.



