ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ನೀರಿನ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಪಾವತಿಸಿದರೆ, ದಂಡ, ಬಡ್ಡಿ ಮತ್ತು ಇತರೆ ಶುಲ್ಕಗಳಲ್ಲಿ ಶೇಕಡಾ 100ರಷ್ಟು ರಿಯಾಯಿತಿ ನೀಡುವ ‘ಏಕಕಾಲಿಕ ತೀರುವಳಿ ಯೋಜನೆ’ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಯೋಜನೆಯ ವಿವರಗಳು ಮತ್ತು ಲಾಭ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜಲಮಂಡಳಿಯ ಒಟ್ಟು ಬಾಕಿ ಮೊತ್ತವು 701 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ 431 ಕೋಟಿ ಅಸಲು ಮೊತ್ತವಾಗಿದ್ದರೆ, ಉಳಿದ 262 ಕೋಟಿ ರೂಪಾಯಿ ಬಡ್ಡಿ ಮತ್ತು ದಂಡದ ಮೊತ್ತವಾಗಿದೆ. ಈ ಯೋಜನೆಯ ಮೂಲಕ, ಗ್ರಾಹಕರು ಕೇವಲ ಅಸಲು ಮೊತ್ತವನ್ನು ಪಾವತಿಸಿ, 262 ಕೋಟಿ ಬಡ್ಡಿ ಮೊತ್ತದಿಂದ ಸಂಪೂರ್ಣ ವಿನಾಯಿತಿ ಪಡೆಯಬಹುದು.
ಯಾರಿಗೆಲ್ಲಾ ಅನ್ವಯ?
ಈ ಯೋಜನೆಯ ಪ್ರಯೋಜನವನ್ನು ಲಕ್ಷಾಂತರ ಗ್ರಾಹಕರು ಪಡೆಯಬಹುದಾಗಿದೆ. ಮುಖ್ಯವಾಗಿ:
ಗೃಹ ಬಳಕೆಯ ಗ್ರಾಹಕರು
ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರ ಶಾಸನಬದ್ಧ ಸಂಸ್ಥೆಗಳು
ಬಾಕಿ ಉಳಿಸಿಕೊಂಡಿರುವ ಎಲ್ಲ ವರ್ಗದ ಗ್ರಾಹಕರು ಸಹ ಏಕಕಾಲದಲ್ಲಿ ಅಸಲು ಮೊತ್ತವನ್ನು ಪಾವತಿಸಿ, ದಂಡ ಮತ್ತು ಬಡ್ಡಿ ಮನ್ನಾದ ಲಾಭವನ್ನು ಪಡೆಯಬಹುದು.
ಸರ್ಕಾರದ ಮುಖ್ಯ ಉದ್ದೇಶ
ಜಲಮಂಡಳಿಯು ತನ್ನ ಬಾಕಿ ಮೊತ್ತವನ್ನು ವಸೂಲಿ ಮಾಡಲು ‘ಒನ್-ಟೈಮ್ ಸೆಟಲ್ಮೆಂಟ್’ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ನಿರ್ಧಾರದಿಂದಾಗಿ ಮಂಡಳಿಗೆ ಬರಬೇಕಾದ 701 ಕೋಟಿಗೂ ಅಧಿಕ ಬಾಕಿ ಮೊತ್ತವನ್ನು ಶೀಘ್ರವಾಗಿ ಸಂಗ್ರಹಿಸಿ, BWSSBಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.

