ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಸಾವಿರಾರು ಮಂದಿ ಪುಣ್ಯ ಸ್ನಾನ ಕೈಗೊಂಡರು.
ಮುಂಜಾನೆ ಶೀತಗಾಳಿ ಹಾಗೂ ಮಂಜು ಮುಸುಕಿದ ವಾತಾವರಣದ ನಡುವೆಯೂ 5.32 ರಿಂದ 6.23 ರವರೆಗಿನ ಬ್ರಹ್ಮ ಮುಹೂರ್ತದಲ್ಲಿ ಭಕ್ತಾಧಿಗಳು ಗಂಗೆಯಲ್ಲಿ ಮುಳುಗೆದ್ದು ಪಾವನ ರಾದರು. ಅಲ್ಲದೇ ಅಗಲಿದ ಪೂರ್ವಜರಿಗೆ ತರ್ಪಣ ಹಾಗೂ ದಾನ-ಧರ್ಮಗಳನ್ನು ಕೈಗೊಂಡರು. ಮೌನಿ ಅಮಾವಾಸ್ಯೆಯಂದು ಗಂಗಾಸ್ನಾನ ಕೈಗೊಂಡು ವಿಷ್ಣು ಮತ್ತು ಸೂರ್ಯಾಧಾರನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯಿದೆ .
ಕಳೆದ ವರ್ಷ ಇದೇ ದಿನದಂದು ಮಹಾ ಕುಂಭಮೇಳದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್ ಜಿಲ್ಲಾಡಳಿತ ಈ ಬಾರಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ಸಂಗಮ ಸ್ಥಳದಲ್ಲಿ 12ಕ್ಕೂ ಹೆಚ್ಚು ಸ್ನಾನದ ಘಾಟ್ ಗಳನ್ನು ರಚಿಸಲಾಗಿದ್ದು, ಎ ಐ ಆಧಾರಿತ ಸಿ ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು ಯಾತ್ರಿಕರಿಗೆ ಪೊಲೀಸರು ನೆರವು ನೀಡುತ್ತಿದ್ದು ಕಂಡುಬಂತು. ಸಂಗಮ ಸ್ಥಳದಲ್ಲಿ ಯಾತ್ರಿಕರ ತುರ್ತು ವೈದ್ಯಕೀಯೋ ಪಾಚಾರಗಳಿಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ.


