ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಒಂಬತ್ತನೇ ಅಂತಾರಾಷ್ಟ್ರೀಯ ಆದಿವಾಸಿ(ಸಂತಾಲ್) ಸಮಾವೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಭಾಗವಹಿಸಿದರು. ಆದರೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳುವುದು ಹಾಗಿರಲಿ ಕಾರ್ಯಕ್ರಮಕ್ಕೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗಿದ್ದರು.
ಹೀಗಾಗಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಧಾನ್‌ನಗರದಲ್ಲಿ ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು ದಟ್ಟಣೆ ಮತ್ತು ಭದ್ರತಾ ಸಮಸ್ಯೆಗಳಿಂದಾಗಿ ಬಾಗ್ಡೋಗ್ರಾ ವಿಮಾನ ನಿಲ್ದಾಣದ ಬಳಿಯ ಗೋಶೈಪುರದ ಸಣ್ಣ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು.
ಇದನ್ನು ಕಂಡು ಅಸಮಾಧಾನ ಹೊರಹಾಕಿದ ರಾಷ್ಟ್ರಪತಿ, ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಮತಾ ಬ್ಯಾನರ್ಜಿ ಉಲ್ಲೇಖಿಸಿ, ‘ನಾನು ಕೂಡ ಬಂಗಾಳದ ಮಹಿಳೆ. ಮಮತಾ ದೀದಿ ನೀವೂ ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗೇಕೆ ಅವಕಾಶ ನೀಡುತ್ತಿಲ್ಲ? ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದರು.
ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಉಂಟಾಗಿದ್ದು, ಜೊತೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಯಾವುದೇ ಪ್ರತಿನಿಧಿ ಹಾಜರಿರಲಿಲ್ಲ . ಹೀಗಾಗಿ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.



