Thursday, December 25, 2025

ಸ್ಯಾನ್ಸನ್ ಗ್ರೂಪ್‌ಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ ನೀಡಲು ಸಿದ್ಧ ಎಂದ ಎಂ.ಬಿ ಪಾಟೀಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್‌ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪತ್ರ ಬರೆದಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಅಕ್ಟೋಬರ್‌ 31ರಂದು ನಮಗೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನವೆಂಬರ್‌ 24ರಂದು ಪ್ರತ್ಯುತ್ತರ ಬರೆದಿದ್ದೆವು. ಈತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ. ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ.

ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದಿದ್ದಾರೆ. ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಶಯ ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯ ಸಾಧ್ಯತೆ ಜತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.‌

error: Content is protected !!