ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಾದ್ಯಂತ ಜನಪ್ರಿಯವಾಗಿರುವ ಮ್ಯಾಕ್‌ಡೊನಾಲ್ಡ್ಸ್ ಕಂಪನಿಯ ಬರ್ಗರ್‌ಗಳು ಈಗ ಭಾರತೀಯ ಪರಂಪರೆಯ ಹೊಸ ಸ್ಪರ್ಶ ಪಡೆದುಕೊಂಡಿವೆ. ಅಂತಾರಾಷ್ಟ್ರೀಯ ಫಾಸ್ಟ್‌ಫುಡ್ ದಿಗ್ಗಜ ಮ್ಯಾಕ್‌ಡೊನಾಲ್ಡ್ಸ್ ತನ್ನ ಮೆನುವಿನಲ್ಲಿ ಮೊದಲ ಬಾರಿಗೆ ‘ಮಿಲೆಟ್ ಬನ್ ಬರ್ಗರ್’ ಅನ್ನು ಪರಿಚಯಿಸಿದ್ದು, ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಿರಿಧಾನ್ಯ ಪ್ರಚಾರ ಅಭಿಯಾನಕ್ಕೆ ದೊಡ್ಡ ಗೆಲುವು ಎಂಬಂತಾಗಿದೆ.
‘ಸೂಪರ್‌ಫುಡ್’ ಎಂದು ಕರೆಯಲ್ಪಡುವ ಸಿರಿಧಾನ್ಯಗಳನ್ನು ಜನಸಾಮಾನ್ಯರ ಆಹಾರದಲ್ಲಿ ಸೇರಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಈಗ ಜಾಗತಿಕ ಬೆಂಬಲ ಸಿಕ್ಕಂತಾಗಿದೆ. ಮ್ಯಾಕ್‌ಡೊನಾಲ್ಡ್ಸ್ ಪರಿಚಯಿಸಿರುವ ಈ ಮಿಲೆಟ್ ಬರ್ಗರ್ ತಂತ್ರಜ್ಞಾನವನ್ನು ಮೈಸೂರು ಮೂಲದ ಸಿಎಫ್‌ಟಿಆರ್‌ಐ (CFTRI) ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಈ ಸಂಸ್ಥೆ ಸಿರಿಧಾನ್ಯ ಆಧಾರಿತ ಬನ್‌ಗಳಲ್ಲಿ ಪೌಷ್ಟಿಕಾಂಶ, ರುಚಿ ಮತ್ತು ವಿನ್ಯಾಸದ ಸಮ್ಮಿಶ್ರಣವನ್ನು ಸಮತೋಲನಗೊಳಿಸುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು, “ವಿದೇಶಿ ಬ್ರ್ಯಾಂಡ್‌ಗಳು ಈಗ ಸ್ವದೇಶಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಭಾರತದ ವಿಜ್ಞಾನ ಮತ್ತು ನವೀನತೆಯ ಶಕ್ತಿ” ಎಂದು ಹೇಳಿದ್ದಾರೆ.
ಒಟ್ಟಾರೆ, ಮೆಕ್‌ಡೊನಾಲ್ಡ್ಸ್‌ನ ‘ಮಿಲೆಟ್ ಬನ್ ಬರ್ಗರ್’ ಪರಿಚಯವು ಕೇವಲ ಒಂದು ಆಹಾರ ಹೊಸತನವಲ್ಲ ಇದು ಭಾರತದ ಪೌಷ್ಟಿಕ ಪರಂಪರೆ ಜಾಗತಿಕ ವೇದಿಕೆಗೆ ಕಾಲಿಟ್ಟಿರುವ ಸಂಕೇತ. ಸಿರಿಧಾನ್ಯ ಆಂದೋಲನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಗೆಲುವಿನ ಕಥೆ ಬರೆದಂತಾಗಿದೆ.

