ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಬಜೆಟ್‌ನಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರವು ಆಶಾದಾಯಕ ಸುದ್ದಿಯೊಂದನ್ನು ನೀಡಿದೆ. ಕೇರಳ ರಾಜ್ಯದ ಯಶಸ್ವಿ ಮಾದರಿಯನ್ನು ಅನುಸರಿಸಿ, ಕರ್ನಾಟಕದಲ್ಲೂ ಗೃಹಾಧಾರಿತ ಉಪಶಾಮಕ ಆರೈಕೆ (Home-based Palliative Care) ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ದೀರ್ಘಕಾಲೀನ, ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಆಸ್ಪತ್ರೆಗೆ ಹೋಗಲು ಅಶಕ್ತರಾಗಿರುವ ರೋಗಿಗಳಿಗೆ ಅವರ ಮನೆಗಳಲ್ಲೇ ಚಿಕಿತ್ಸೆ ಮತ್ತು ಶುಶ್ರೂಷೆ ಸಿಗಲಿದೆ.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಸಿದ್ಧ ‘ಪಾಲಿಯಂ ಇಂಡಿಯಾ’ ಸಂಸ್ಥೆಯ ತಾಂತ್ರಿಕ ಸಹಯೋಗವನ್ನು ಪಡೆಯಲಾಗುತ್ತಿದೆ.
ಕ್ಯಾನ್ಸರ್, ಕಿಡ್ನಿ ವೈಫಲ್ಯ ಅಥವಾ ಪಾರ್ಶ್ವವಾಯುವಿನಂತಹ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ನೋವು ಕಡಿಮೆ ಮಾಡುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೇವಲ ಔಷಧಿಯಷ್ಟೇ ಅಲ್ಲದೆ, ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ.



