ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಪರಾರಿಯಾದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ಪ್ರಕರಣದಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಬೆಲ್ಜಿಯಂನ ಉಚ್ಚ ನ್ಯಾಯಾಲಯವಾದ ಕೋರ್ಟ್ ಆಫ್ ಕ್ಯಾಸೇಷನ್, ಚೋಕ್ಸಿ ಸಲ್ಲಿಸಿದ್ದ ಹಸ್ತಾಂತರ ವಿರೋಧಿ ಅರ್ಜಿಯನ್ನು ತಿರಸ್ಕರಿಸಿದ್ದು, ಅವರ ಭಾರತಕ್ಕೆ ಹಸ್ತಾಂತರದ ದಾರಿ ಇನ್ನಷ್ಟು ಸುಗಮವಾಗಿದೆ.
ಚೋಕ್ಸಿ ಭಾರತದಲ್ಲಿ ಹಿಂಸೆ ಹಾಗೂ ಅಮಾನುಷ ವರ್ತನೆಯ ಅಪಾಯವಿದೆ ಎಂದು ವಾದಿಸಿದ್ದರು. ಆದರೆ ಈ ಆರೋಪಗಳಿಗೆ ಸಮರ್ಪಕ ಸಾಕ್ಷ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾನೂನು ಸರಿಯಾಗಿ ಅನ್ವಯಗೊಂಡಿದೆಯೇ ಎಂಬುದನ್ನು ಮಾತ್ರ ಪರಿಶೀಲಿಸುವ ಅಧಿಕಾರ ನಮಗಿದ್ದು, ಕೆಳ ನ್ಯಾಯಾಲಯಗಳ ತೀರ್ಪಿನಲ್ಲಿ ಯಾವುದೇ ಕಾನೂನು ದೋಷ ಕಂಡುಬಂದಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚೋಕ್ಸಿಗೆ ಯುರೋ 104 ದಂಡ ವಿಧಿಸಲಾಗಿದೆ.
2018ರಲ್ಲಿ ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ, ಸುಮಾರು ₹13,000 ಕೋಟಿ ಪಿಎನ್‌ಬಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಭಾರತ ಸರ್ಕಾರ ನೀಡಿರುವ ಭದ್ರತಾ ಮತ್ತು ಮಾನವ ಹಕ್ಕು ಭರವಸೆಗಳನ್ನು ಪರಿಗಣಿಸಿದ ಬೆಲ್ಜಿಯಂ, ಹಸ್ತಾಂತರ ಪ್ರಕ್ರಿಯೆಗೆ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.

