Saturday, November 1, 2025

ಮೆಲ್ಬೋರ್ನ್ ದುಃಸ್ವಪ್ನ: 17 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಆಸೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಘಾತ ಎದುರಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಸೂರ್ಯಕುಮಾರ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್‌ಗಳ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.

ಭಾರತದ ಬ್ಯಾಟಿಂಗ್ ವೈಫಲ್ಯವೇ ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಮೆಲ್ಬೋರ್ನ್ ಪಿಚ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪೆರೇಡ್ ನಡೆಸಿದರು. ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ, ಟೀಂ ಇಂಡಿಯಾ ಕೇವಲ 18.4 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಇಬ್ಬರು ಆಟಗಾರರನ್ನು ಬಿಟ್ಟರೆ ಉಳಿದ 9 ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಔಟ್ ಆಗಿದ್ದು ದುರಂತ. ಎಂಟನೇ ಓವರ್‌ನಲ್ಲಿ ಕೇವಲ 49 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ಆಸ್ಟ್ರೇಲಿಯಾದ ಮಾರಕ ದಾಳಿಯಲ್ಲಿ ಮಿಂಚಿದ ವೇಗಿ ಜೋಶ್ ಹೇಜಲ್‌ವುಡ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 13 ರನ್ ನೀಡಿ, ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸೇರಿದಂತೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಅಭಿಷೇಕ್-ಹರ್ಷಿತ್ ಸಾಹಸ: 100ರ ಗಡಿ ದಾಟಿಸಿದರೂ ಪ್ರಯೋಜನವಾಗಲಿಲ್ಲ
ಅನನುಭವಿಗಳೇ ಹೆಚ್ಚಿದ್ದ ತಂಡದಲ್ಲಿ, ಕಳಪೆ ಪ್ರದರ್ಶನದ ನಡುವೆಯೂ ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ ಗಮನಾರ್ಹ ಪ್ರದರ್ಶನ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು 56 ರನ್‌ಗಳ ಮಹತ್ವದ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ಭಾರತದ ಮೊತ್ತವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ ಕೆಳ ಕ್ರಮಾಂಕದಿಂದ ಹೆಚ್ಚಿನ ಬೆಂಬಲ ಸಿಗದೆ, ಭಾರತ 125 ರನ್‌ಗಳಿಗೆ ಆಲೌಟ್ ಆಯಿತು.

ಆಸೀಸ್ ಆರಂಭಿಕರ ಅಬ್ಬರ: ಪವರ್‌ಪ್ಲೇನಲ್ಲೇ ಗೆಲುವು ಖಚಿತ
126 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿ – ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ – ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ ಐದನೇ ಓವರ್‌ನಲ್ಲಿ ತಂಡದ ಮೊತ್ತವನ್ನು 50 ರನ್​ಗಳ ಗಡಿ ದಾಟಿಸಿದರು. ಟ್ರಾವಿಸ್ ಹೆಡ್ (28) ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರೂ, ಮಿಚೆಲ್ ಮಾರ್ಷ್ (46) ಆಕ್ರಮಣಕಾರಿ ಆಟ ಮುಂದುವರೆಸಿದರು. ಕುಲ್ದೀಪ್ ಯಾದವ್ ಅವರ ಮೊದಲ ಓವರ್‌ನಲ್ಲೇ 20 ರನ್ ಗಳಿಸಿದ ಮಾರ್ಷ್ ಅದೇ ಓವರ್‌ನಲ್ಲಿ ಔಟ್ ಆದರು.

ಗೆಲುವಿನ ಸನಿಹ ಬಂದ ನಂತರ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಂಟುತ್ತಾ ಸಾಗಿತು. ಜಸ್ಪ್ರೀತ್ ಬುಮ್ರಾ ಸತತ ಎರಡು ವಿಕೆಟ್‌ಗಳನ್ನು ಪಡೆದರೂ, ಆಗಲೇ ಟೀಂ ಇಂಡಿಯಾದ ಸೋಲು ಖಚಿತವಾಗಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ ಕೇವಲ 13.2 ಓವರ್‌ಗಳಲ್ಲಿ ಗುರಿ ತಲುಪಿ ಜಯದ ನಗೆ ಬೀರಿತು.

ಮುರಿಯಿತು 17 ವರ್ಷಗಳ ಗೆಲುವಿನ ದಾಖಲೆ
ಈ ಸೋಲಿನೊಂದಿಗೆ ಭಾರತವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 17 ವರ್ಷಗಳ ನಂತರ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಭಾರತ ಇಲ್ಲಿ ಕೊನೆಯ ಬಾರಿಗೆ ಸೋತಿದ್ದು 2008 ರಲ್ಲಿ.

ಸರಣಿಯನ್ನು ಗೆಲ್ಲಲು ಟೀಂ ಇಂಡಿಯಾ ಈಗ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

error: Content is protected !!