ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸೌರಶಕ್ತಿ ಯೋಜನೆಗಳ ಪ್ರಗತಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿನ ಸದಸ್ಯ ರಾಷ್ಟ್ರಗಳು ಅತೀವ ಮೆಚ್ಚುಗೆ ವ್ಯಕ್ತಪಡಿಸಿವೆ. 50ಕ್ಕೂ ಹೆಚ್ಚು ದೇಶಗಳು ತಮ್ಮ ರಾಷ್ಟ್ರಗಳಲ್ಲಿ ಭಾರತದ ಸೌರ ಮಾದರಿಯನ್ನು ಅನುಸರಿಸಲು ಮುಂದಾಗಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ದಿಲ್ಲಿಯ ಭಾರತ ಮಂಟಪದಲ್ಲಿ ಕಳೆದು ಎರಡು ದಿನಗಳಿಂದ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನದಲ್ಲಿ ಭಾಗಿಯಾಗಿದ್ದ ಸದಸ್ಯ ರಾಷ್ಟ್ರಗಳೆಲ್ಲವೂ ಭಾರತದ ಸೌರಶಕ್ತಿ ಪ್ರಗತಿಗೆ ತಲೆದೂಗಿವೆ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಪರಿಣಾಮ ಯಶಸ್ಸುಗೊಂಡ ಸೌರಶಕ್ತಿ ಯೋಜನೆಗಳ ಮಾದರಿಯ ಮಾಹಿತಿಯನ್ನು 125ಕ್ಕೂ ಹೆಚ್ಚು ರಾಷ್ಟ್ರಗಳು ಪಡೆದುಕೊಂಡಿವೆ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್ ದೃಷ್ಟಿಕೋನವನ್ನು ಬೆಂಬಲಿಸಿ ಸೌರಶಕ್ತಿ ವಲಯದಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ವೇಗಗೊಳಿಸುವ ಒಪ್ಪಂದಕ್ಕೆ 120ಕ್ಕೂ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ. ತಮ್ಮ ದೇಶಗಳಲ್ಲಿ ಸೌರಶಕ್ತಿ ಪ್ರಗತಿಗೆ ಭಾರತದ ಸಹಾಯ ಹಸ್ತಕ್ಕೆ ಮನವಿ ಮಾಡಿದ್ದಾರೆ ಎಂದರು.
ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ 2030ರ ಗುರಿಗಿಂತ 5 ವರ್ಷಗಳ ಮೊದಲೇ ಪಳೆಯುಳಿಕೇತರ ಮೂಲಗಳಿಂದ ಶೇಕಡ 50ರಷ್ಟು ಇಂಧನ ಸಾಮರ್ಥ್ಯದ ಗುರಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

