ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್ಬಾಲ್ ತವರುಮನೆ ಎಂದೇ ಹೆಸರಾದ ಕೋಲ್ಕತಾ ನಗರ ಅಪರೂಪದ ಕ್ಷಣವೊಂದು ಸಾಕ್ಷಿಯಾಯಿತು. ವಿಶ್ವ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ 14 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟ ಸುದ್ದಿ ತಿಳಿಯುತ್ತಿದ್ದಂತೆ, ಅವರನ್ನು ಒಮ್ಮೆ ನೋಡಬೇಕೆಂಬ ಆಸೆಯಿಂದ ಸಾವಿರಾರು ಅಭಿಮಾನಿಗಳು ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ಸೇರಿದ್ದರು. ಆದರೆ ನಿರೀಕ್ಷೆಗೆ ವಿರುದ್ಧವಾಗಿ, ಮೆಸ್ಸಿಯ ಹಾಜರಾತಿ ಕೆಲವೇ ನಿಮಿಷಗಳಿಗೆ ಸೀಮಿತವಾದ ಕಾರಣ, ಕ್ರೀಡಾಂಗಣದಲ್ಲಿ ಗೊಂದಲ ಮತ್ತು ಅಸಮಾಧಾನದ ವಾತಾವರಣ ನಿರ್ಮಾಣವಾಯಿತು.
ಮಧ್ಯರಾತ್ರಿ ಕೋಲ್ಕತಾಗೆ ಆಗಮಿಸಿದ ಮೆಸ್ಸಿ, ಕ್ರೀಡಾಂಗಣದಲ್ಲಿ ಕೇವಲ 10 ನಿಮಿಷಗಳಷ್ಟೇ ಕಾಲ ಕಳೆಯುತ್ತಿದ್ದಂತೆ ಅಲ್ಲಿಂದ ನಿರ್ಗಮಿಸಿದರು. ಈ ಅಲ್ಪಾವಧಿಯ ದರ್ಶನದಿಂದ ನಿರಾಸೆಗೊಂಡ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕೆಲವರು ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದು ಆಕ್ರೋಶ ತೋರಿಸಿದ್ದು, ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಮೆಸ್ಸಿ ನಗರದಲ್ಲಿ ನಿಗದಿಪಡಿಸಿರುವ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು. ವಿಐಪಿ ರಸ್ತೆಯಲ್ಲಿ ನಿರ್ಮಿಸಿರುವ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಅಲ್ಲದೆ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ, ಲಿಯಾಂಡರ್ ಪೇಸ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ನಟ ಶಾರುಖ್ ಖಾನ್ ಉಪಸ್ಥಿತರಿರುವ ನಿರೀಕ್ಷೆಯಿದೆ.

