Saturday, December 13, 2025

ಕೋಲ್ಕತ್ತಾಗೆ ಮೆಸ್ಸಿ ಭೇಟಿ | ಅಭಿಮಾನಿಗಳ ದಾಂಧಲೆ: ಅವ್ಯವಸ್ಥೆ ಬಳಿಕ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್ಬಾಲ್ ಪ್ರೇಮಿಗಳ ಭಾರೀ ನಿರೀಕ್ಷೆಯ ನಡುವೆ ಭಾರತಕ್ಕೆ ಬಂದಿದ್ದ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯ ಕೋಲ್ಕತ್ತಾ ಭೇಟಿ ಗೊಂದಲದಲ್ಲಿ ಮುಕ್ತಾಯಗೊಂಡಿದೆ. 14 ವರ್ಷಗಳ ಬಳಿಕ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ಮೆಸ್ಸಿಯ ಮೊದಲ ಕಾರ್ಯಕ್ರಮವೇ ಅವ್ಯವಸ್ಥೆಯಿಂದ ಕಲುಷಿತಗೊಂಡಿದ್ದು, ಕ್ರೀಡಾಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿಯ ದರ್ಶನಕ್ಕಾಗಿ ಸಾವಿರಾರು ಜನ ಸೇರಿದ್ದರು. ಆದರೆ ಮೆಸ್ಸಿ ಆಗಮಿಸುತ್ತಿದ್ದಂತೆ ಭದ್ರತಾ ವ್ಯವಸ್ಥೆ ಕೈಮೀರಿದ ಕಾರಣ ಅಭಿಮಾನಿಗಳು ಸ್ಟೇಡಿಯಂ ಒಳಗೆ ನುಗ್ಗಿದ್ದು ಪರಿಸ್ಥಿತಿ ನಿಯಂತ್ರಣ ತಪ್ಪಿತು. ಗದ್ದಲ ಹೆಚ್ಚಿದ ಹಿನ್ನೆಲೆಯಲ್ಲಿ ಮೆಸ್ಸಿ ಕೇವಲ ಹತ್ತು ನಿಮಿಷಗಳಲ್ಲೇ ಕ್ರೀಡಾಂಗಣದಿಂದ ಹೊರನಡೆಯಬೇಕಾಯಿತು. ಇದರಿಂದಾಗಿ ಪೂರ್ವನಿಯೋಜಿತ ಕಾರ್ಯಕ್ರಮಗಳು ಸಂಪೂರ್ಣವಾಗಿ ರದ್ದಾದವು.

ಈ ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ನಡೆದ ಅವ್ಯವಸ್ಥೆಯಿಂದ ತಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಮೆಸ್ಸಿ, ಕ್ರೀಡಾಭಿಮಾನಿಗಳು ಹಾಗೂ ಫುಟ್ಬಾಲ್ ಪ್ರೇಮಿಗಳಿಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಘಟನೆಯ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ನೇತೃತ್ವದಲ್ಲಿ ಸಮಿತಿ ರಚಿಸಿರುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

error: Content is protected !!