ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ದರಗಳು ಹೆಚ್ಚಿದಾಗಿನಿಂದಲೂ ಅದನ್ನು ಇಳಿಕೆ ಮಾಡಬೇಕು ಎಂದು ಮೆಟ್ರೋ ಪ್ರಯಾಣಿಕರು ನಿರಂತರವಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಯಾಣಿಕರ ಈ ಬೇಡಿಕೆಗೆ ಮೆಟ್ರೋ ದರ ನಿಗದಿ ಸಮಿತಿಯು ಸ್ಪಷ್ಟ ನಿರಾಕರಣೆ ಮೂಲಕ ಶಾಕ್ ನೀಡಿದೆ.
ದರ ಇಳಿಕೆ ಒತ್ತಾಯದ ಜೊತೆಗೆ ಪ್ರಯಾಣಿಕರು ಸಲ್ಲಿಸಿದ್ದ ಸಲಹೆಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಿರುವ ದರ ನಿಗದಿ ಸಮಿತಿ, ಮೆಟ್ರೋ ದರವನ್ನು ಇಳಿಕೆ ಮಾಡುವುದು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ. ಇದು ನಿತ್ಯ ಪ್ರಯಾಣಿಕರಿಗೆ ತೀವ್ರ ನಿರಾಸೆ ಮೂಡಿಸಿದೆ.
ಮೆಟ್ರೋ ದರ ಇಳಿಕೆಯ ಬೇಡಿಕೆಯ ಜೊತೆಗೆ, ಪ್ರಯಾಣಿಕರು ಬಿಎಂಆರ್‌ಸಿಎಲ್‌ಗೆ ಮತ್ತು ದರ ನಿಗದಿ ಸಮಿತಿಗೆ ಮಾಸಿಕ ಪಾಸ್ ಮತ್ತು ವಿದ್ಯಾರ್ಥಿ ಪಾಸ್ ನೀಡುವಂತೆ ಮನವಿ ಮಾಡಿದ್ದರು.
ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಮಿತಿ, ತಿಂಗಳ ಪಾಸ್ ನೀಡುವ ಪ್ರಸ್ತಾವವನ್ನು ತಿರಸ್ಕರಿಸಿದೆ. ಜೊತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಪಾಸ್ (ಸಿಂಗಲ್ ಪಾಸ್) ಬೇಡಿಕೆಯನ್ನು ಸಹ ತಳ್ಳಿಹಾಕಿದೆ. ಆದಾಗ್ಯೂ, ಶಿಕ್ಷಣ ಸಂಸ್ಥೆಗಳು ಸಾಮೂಹಿಕವಾಗಿ ಪ್ರಸ್ತಾವನೆ ಸಲ್ಲಿಸಿದರೆ, ಅವರಿಗೆ ಗ್ರೂಪ್ ಪಾಸ್ (ಸಮೂಹ ಪಾಸ್) ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಮಹತ್ವದ ಅಪ್ಡೇಟ್ ನೀಡಿದೆ.
ಅಲ್ಲದೆ, ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಮೆಟ್ರೋ ಪ್ರಯಾಣ ದರದಲ್ಲಿ ಯಾವುದೇ ರಿಯಾಯಿತಿ ಅಥವಾ ಡಿಸ್ಕೌಂಟ್ ನೀಡಲು ಸಾಧ್ಯವಿಲ್ಲ ಎಂದು ಸಮಿತಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

