ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆಯನ್ನು ನಿರ್ಮಿಸಲು ಮೈಕ್ರೋಸಾಫ್ಟ್ 17.5 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಹೂಡಿಕೆ ಮಾಡಲಿದೆ ಎಂದು ಸಂಸ್ಥೆಯ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
ಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸತ್ಯ ನಾದೆಲ್ಲಾ ಈ ಹೂಡಿಕೆಯನ್ನು ಘೋಷಿಸಿದ್ದಾರೆ.
ಭಾರತದಲ್ಲಿ ಕ್ಲೌಡ್ ಮತ್ತು ಕಂಪ್ಯೂಟಿಂಗ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚಿಸುವುದು, ಎಐ ಕೌಶಲ್ಯ ಯೋಜನೆಗಳನ್ನು ವಿಸ್ತರಿಸುವುದು, ಎಲ್ಲಾ ಸೆಕ್ಟರ್ಗಳಲ್ಲಿ ಸ್ಥಳೀಯ ಡಾಟಾ ಸಿಸ್ಟಂಗಳನ್ನು ಸ್ಥಾಪಿಸಿವುದು, ಇವು ಮುಖ್ಯವಾಗಿ ಮೈಕ್ರೋಸಾಫ್ಟ್ ಕಂಪನಿಯ ಗುರಿಗಳಾಗಿವೆ.
‘ಭಾರತದ ಮಹತ್ವಾಕಾಂಕ್ಷೆಗೆ ಪೂರಕವಾಗಿ ಮೈಕ್ರೋಸಾಫ್ಟ್ ಸಂಸ್ಥೆ 17.5 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧವಾಗಿದೆ. ಭಾರತದ ಎಐ ಆದ್ಯತೆಯ ಭವಿಷ್ಯಕ್ಕೆ ಬೇಕಾದ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆ ಸಾಮರ್ಥ್ಯ ನಿರ್ಮಿಸಲು ನೆರವಾಗಲಿರುವ ಇದು ಏಷ್ಯಾದಲ್ಲಿ ನಮ್ಮ ಅತಿದೊಡ್ಡ ಹೂಡಿಕೆಯಾಗಿದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಮೈಕ್ರೋಸಾಫ್ಟ್ ಮುಂದಿನ ಎರಡು ವರ್ಷಗಳಿಗೆ ಭಾರತದಲ್ಲಿ ಕ್ಲೌಡ್ ಮತ್ತು ಎಐ ಸೌಕರ್ಯ ನಿರ್ಮಿಸಲು 3 ಬಿಲಿಯನ್ ಡಾಲರ್ ಹೂಡಿಕೆ ಪ್ರಕಟಿಸಿತ್ತು. ಮುಂದಿನ ಐದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಜನರಿಗೆ ಎಐ ಕೌಶಲ್ಯಗಳ ತರಬೇತಿ ನೀಡಿ ಅವರನ್ನು ಸ್ಪರ್ಧಾತ್ಮಕಗೊಳಿಸಲು ಈ ವ್ಯವಸ್ಥೆ ಸಹಾಯವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿತ್ತು.

