ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಅಫ್ಘಾನಿಸ್ತಾನದ ಮಜಾರ್-ಇ-ಶರೀಫ್ ನಗರದ ಬಳಿ ಸೋಮವಾರ ಮಧ್ಯರಾತ್ರಿ ಭೂಕಂಪನ ಸಂಭವಿಸಿದೆ. ಈ ಭೂಕಂಪದಿಂದ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ 6.3 ಆಗಿದ್ದು, ಇದು ದೇಶದ ಉತ್ತರ ಭಾಗದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ದಾಖಲಾಗಿರುವ ಅತ್ಯಂತ ಭಾರೀ ಕಂಪನಗಳಲ್ಲಿ ಒಂದಾಗಿದೆ.
ಭೂಕಂಪ ಸಂಭವಿಸಿದ ಕ್ಷಣದಲ್ಲೇ ಜನರು ತಮ್ಮ ಮಕ್ಕಳ ಸಮೇತ ಮನೆಯಿಂದ ಹೊರಗೆ ಓಡಿಬಂದಿದ್ದು, ಸ್ಥಳೀಯ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಜಾರ್-ಇ-ಶರೀಫ್ ನಗರದಲ್ಲೇ ಅಲ್ಲದೆ, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಗಡಿ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದ್ದು, ದೆಹಲಿ-ಎನ್‌ಸಿಆರ್ ಪ್ರದೇಶಗಳಿಗೂ ಅಲ್ಪ ಪ್ರಮಾಣದಲ್ಲಿ ಭೂಮಿ ನಡುಗಿದೆ ಎಂದು ವರದಿಯಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪದ ಕೇಂದ್ರ ಬಿಂದುವು 28 ಕಿಲೋಮೀಟರ್ ಆಳದಲ್ಲಿದ್ದು, ಅಕ್ಷಾಂಶ 36.51 ಉತ್ತರ ಹಾಗೂ ರೇಖಾಂಶ 67.50 ಪೂರ್ವದಲ್ಲಿ ನೊಂದಾಯಿಸಲಾಗಿದೆ. ಎನ್‌ಸಿಎಸ್ (National Center for Seismology) ಟ್ವಿಟರ್ (ಎಕ್ಸ್) ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, ಕಂಪನವು ಭಾರತೀಯ ಸಮಯ ಪ್ರಕಾರ ಬೆಳಗಿನ 1:59ಕ್ಕೆ ಸಂಭವಿಸಿದೆ ಎಂದು ದೃಢಪಡಿಸಿದೆ.

