Tuesday, December 16, 2025

ವಲಸೆ ಕಾರ್ಮಿಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ! ಪತಿಯ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ಮೂಲದ 24 ವರ್ಷದ ವಲಸೆ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಈ ವೇಳೆ ಆಕೆಯ ಪತಿಗೂ ಹಲ್ಲೆ ಮಡಿದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಮತ್ತು ಆಕೆಯ ಪತಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸಕ್ಕಾಗಿ ಅಸ್ಸಾಂನಿಂದ ತೂತುಕುಡಿಗೆ ಆಗಮಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಕೆಲಸ ತೊರೆಯಲು ದಂಪತಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲಸ ಬಿಟ್ಟು ಹೊರಡುವ ನಿರ್ಧಾರ ತಿಳಿದ ಬಳಿಕ ಪ್ರಮುಖ ಆರೋಪಿ, ಇತರ ಇಬ್ಬರನ್ನು ಆಟೋದಲ್ಲಿ ಕರೆಸಿ ದಂಪತಿಯನ್ನು ತಡೆಯಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಳ ಹಾಗೂ ಕೆಲಸದ ವಿಚಾರದಲ್ಲಿ ಜಗಳ ಉಂಟಾದ ನಂತರ, ಮಹಿಳೆಯನ್ನು ಬಲವಂತವಾಗಿ ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ಪತಿಯ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯ ನಂತರ ಪೀಡಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಇಂತಹ ಘಟನೆಗಳು ವಲಸೆ ಕಾರ್ಮಿಕರ ಭದ್ರತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿವೆ ಎಂದು ಸಾಮಾಜಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

error: Content is protected !!