ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನ ಸುಮಾರು 1:34ರ ಹೊತ್ತಿಗೆ ಭೂಮಿ ಲಘುವಾಗಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.8 ರಷ್ಟು ದಾಖಲಾಗಿದೆ.
ಬೀದರ್ ತಾಲೂಕಿನ ರಂಜೋಲಖೇಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚುಕನಹಳ್ಳಿ ಮತ್ತು ಸೀರಕಟಹಳ್ಳಿ ಗ್ರಾಮಗಳಲ್ಲಿ ಈ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಹುಚುಕನಹಳ್ಳಿಯ ವಾಯವ್ಯ ದಿಕ್ಕಿಗೆ ಸುಮಾರು 1.0 ಕಿ.ಮೀ ದೂರದಲ್ಲಿದೆ ಎಂದು ಗುರುತಿಸಲಾಗಿದೆ.
ಕೇವಲ ಕಂಪನ ಮಾತ್ರವಲ್ಲದೆ, ಭೂಮಿಯ ಒಳಗಿನಿಂದ ವಿಚಿತ್ರವಾದ ಭಾರಿ ಶಬ್ದ ಕೇಳಿಬಂದಿದ್ದರಿಂದ ಸಾರ್ವಜನಿಕರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ವಿಷಯ ತಿಳಿದ ತಕ್ಷಣ ಬೀದರ್ ತಹಶೀಲ್ದಾರ್ ಹಾಗೂ ಸ್ಥಳೀಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
“ಇದು ಅತ್ಯಂತ ಕಡಿಮೆ ತೀವ್ರತೆಯ ಲಘು ಭೂಕಂಪನವಾಗಿದ್ದು, ಇದರಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ” ಎಂದು ಅಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದಾರೆ.



