Saturday, October 25, 2025

ರಾಜಕಾರಣದಲ್ಲಿ ‘ಗಣಿ’ ಕ್ರಾಂತಿ: ಖೂಬಾ ಅಕ್ರಮ ಗಣಿಗಾರಿಕೆ ಕೇಸ್‌ ಕೋರ್ಟ್‌ ಅಂಗಳಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿ ಜಿಲ್ಲೆಯ ಕಾಳಗಿ ತಹಶೀಲ್ದಾರ್ ಕಚೇರಿಯಿಂದ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಧಿಕಾರಿಗಳು ₹25.30 ಕೋಟಿ ರೂ. ದಂಡ ಪಾವತಿಸಲು ನೋಟಿಸ್ ನೀಡಿದ್ದು, ರಾಜಕೀಯ ವಲಯದಲ್ಲಿ ಇದರ ಬಗ್ಗೆ ಚರ್ಚೆ ಶುರುವಾಗಿದೆ.

ಮಾಹಿತಿಯ ಪ್ರಕಾರ, ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದಲ್ಲಿ ಭಗವಂತ್ ಖೂಬಾ ಅವರು 2014ರ ಜುಲೈ 19ರಿಂದ 2019ರ ಜುಲೈ 18ರವರೆಗೆ ಕೇವಲ 2 ಎಕರೆ ಪ್ರದೇಶಕ್ಕೆ ಗಣಿಗಾರಿಕೆ ಅನುಮತಿ ಪಡೆದಿದ್ದರು. ಆದರೆ, ಅವರು ಅನುಮತಿಗಿಂತ ಹೆಚ್ಚಾಗಿ 8 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಈ ಅಕ್ರಮದ ಕುರಿತು ಸ್ಥಳೀಯ ನಿವಾಸಿ ಸಂಜೀವಕುಮಾರ್ ತಿಪ್ಪಣ್ಣ ಜವಕರ್ ದೂರು ನೀಡಿದ್ದರು. ದೂರು ಆಧರಿಸಿ ಗಣಿ ಇಲಾಖೆ ಹಾಗೂ ಕಾಳಗಿ ತಹಶೀಲ್ದಾರರು ಜಂಟಿ ಪರಿಶೀಲನೆ ನಡೆಸಿ, ಅಕ್ರಮ ಗಣಿಗಾರಿಕೆಯ ಪ್ರಮಾಣ ಸಾಬೀತಾದ ವರದಿ ಸಲ್ಲಿಸಿದ್ದಾರೆ.

ಅದನ್ನು ಅನುಸರಿಸಿ ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದು, ಕೊನೆಯದಾಗಿ ₹25.30 ಕೋಟಿ ರೂ. ದಂಡ ಪಾವತಿಸುವಂತೆ ಅಧಿಕೃತ ಸೂಚನೆ ನೀಡಿದ್ದಾರೆ. ಈ ನೋಟಿಸ್‌ನ್ನು ಪ್ರಶ್ನಿಸಿ ಭಗವಂತ್ ಖೂಬಾ ಕಾನೂನು ಮೊರೆ ಹೋಗಿದ್ದು, ಪ್ರಕರಣ ಈಗ ನ್ಯಾಯಾಲಯದ ಪರಿಗಣನೆಗೆ ಬಂದಿದೆ. ಜಿಲ್ಲೆಯಲ್ಲಿ ಈ ಬೆಳವಣಿಗೆ ರಾಜಕೀಯ ತೀವ್ರತೆಗೂ ಕಾರಣವಾಗಿದೆ.

error: Content is protected !!