ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವನಸಮುದ್ರದ ಜಲವಿದ್ಯುತ್‌ಗಾರದ ಜಲಾಶಯದ ಸಮೀಪದ ನಾಲೆಯಲ್ಲಿ ಸಿಲುಕಿದ್ದ ಒಂದು ಸಲಗವನ್ನು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪಶುವೈದ್ಯರ ತಂಡವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಈಶ್ವರ ಖಂಡ್ರೆ ಅವರು ಇಂದು ಗೌರವಿಸಿದರು.
ಕೊಳ್ಳೇಗಾಲದಲ್ಲಿ ನೂತನವಾಗಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ನಂತರ ನಡೆದ ಅಧಿಕಾರಿಗಳ ಸಭೆಗೂ ಮುನ್ನ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಮಾರು 40 ಅಡಿ ಆಳದ ಕಂದಕದಲ್ಲಿ ಸಿಲುಕಿದ್ದ ಆನೆಯನ್ನು ಸುರಕ್ಷಿತವಾಗಿ ಹೊರತರಲು ಶ್ರಮಿಸಿದ ತಂಡಕ್ಕೆ ಸಚಿವರು ಅಭಿನಂದನೆ ಸಲ್ಲಿಸಿ ಪುರಸ್ಕರಿಸಿದರು.
ಸನ್ಮಾನಿತರ ವಿವರ:
ರಘು: ಉಪ ಅರಣ್ಯ ಸಂರಕ್ಷಣಾಧಿಕಾರಿ (ಮಂಡ್ಯ ಪ್ರಾದೇಶಿಕ ವಿಭಾಗ)
ಮಹದೇವಸ್ವಾಮಿ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಗವಿಯಪ್ಪ: ವಲಯ ಅರಣ್ಯಾಧಿಕಾರಿ
ಆದರ್ಶ್: ಪಶುವೈದ್ಯ
ಅಕ್ರಮ್: ಶಾರ್ಪ್ ಶೂಟರ್
ಸನ್ಮಾನದ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, “ಅತ್ಯುತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಮತ್ತು ಉತ್ತಮ ಕಾರ್ಯ ಮಾಡುವ ಸಿಬ್ಬಂದಿಗಳು ಖಂಡಿತವಾಗಿಯೂ ಪ್ರಶಂಸೆ ಮತ್ತು ಸನ್ಮಾನಕ್ಕೆ ಅರ್ಹರಾಗುತ್ತಾರೆ. ಅದೇ ರೀತಿ, ತಮ್ಮ ಕೆಲಸದಲ್ಲಿ ಲೋಪವೆಸಗುವ ಅಥವಾ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಯಾವುದೇ ನಿರ್ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

