ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಳಿವಿನಂಚಿನಲ್ಲಿರುವ ರಣಹದ್ದು ಬಗ್ಗೆ ತಪ್ಪು ಮಾಹಿತಿ ಪ್ರಸಾರವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆ ತಿಳುವಳಿಕೆ ನೋಟಿಸ್ ಜಾರಿ ಮಾಡಿದೆ. ಈ ಕ್ರಮ ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನ ಆಧಾರದ ಮೇಲೆ ಕೈಗೊಳ್ಳಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ರಣಹದ್ದುಗಳು ಯಾವುದೇ ಜೀವಿಗಳನ್ನು ಬೇಟೆಯಾಡುವ ಪಕ್ಷಿಗಳಲ್ಲ. ಹದ್ದು ಮತ್ತು ರಣಹದ್ದುಗಳ ಸ್ವಭಾವ, ಆಹಾರ ಪದ್ಧತಿ ಹಾಗೂ ಪಾತ್ರದಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಆದರೆ ಇತ್ತೀಚೆಗೆ ‘ವಾರದ ಕಥೆ – ಕಿಚ್ಚನ ಜೊತೆ’ ಸಂಚಿಕೆಯಲ್ಲಿ ರಣಹದ್ದುಗಳನ್ನು ಬೇಟೆಯಾಡುವ, ಸಂಚು ರೂಪಿಸುವ ಪಕ್ಷಿಯಂತೆ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ರೀತಿಯ ಹೇಳಿಕೆಗಳು ಪಕ್ಷಿ ಪ್ರೇಮಿಗಳು ಹಾಗೂ ಪರಿಸರವಾದಿಗಳಲ್ಲಿ ಅಸಮಾಧಾನ ಮೂಡಿಸಿದ್ದು, ರಣಹದ್ದುಗಳ ಸಂರಕ್ಷಣೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಮನಗರದ ಡಿಆರ್‌ಎಫ್ಓ ಸುಷ್ಮಾ ಅವರು ಖುದ್ದಾಗಿ ನೋಟಿಸ್ ನೀಡಿ, ಕಾರ್ಯಕ್ರಮದಲ್ಲಿ ಹದ್ದು ಮತ್ತು ರಣಹದ್ದುಗಳ ನಡುವಿನ ವ್ಯತ್ಯಾಸದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದಾರೆ.
ಕೆಲ ವಾರಗಳ ಹಿಂದೆ ನಡೆದ ಟಾಸ್ಕ್‌ನಲ್ಲಿ ಸ್ಪರ್ಧಿಯೊಬ್ಬರ ಕೊರಳಿಗೆ ರಣಹದ್ದು ಚಿತ್ರದ ಪ್ಲಕಾರ್ಡ್ ಹಾಕಲಾಗಿದ್ದು, ಆ ಸಂದರ್ಭದಲ್ಲಿನ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು.


