January15, 2026
Thursday, January 15, 2026
spot_img

ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡ್ರಾ? ಈಗ ಒಟಿಟಿಗೆ ಬರ್ತಿದೆ ಮಲ್ಟಿಸ್ಟಾರರ್ ಸಿನಿಮಾ ‘45’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮೂವರು ಪ್ರತಿಭಾವಂತ ನಟರಾದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅವರ ಸಂಗಮದಲ್ಲಿ ಮೂಡಿಬಂದಿರುವ ‘45’ ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ಚಿತ್ರವು ಇದೇ ಜನವರಿ 23ರಿಂದ ‘ಜೀ5’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ಮೆಗಾ ಫೋನ್ ಹಿಡಿದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಂ. ರಮೇಶ್ ರೆಡ್ಡಿ ಅವರು ‘ಸೂರಜ್ ಪ್ರೊಡಕ್ಷನ್ಸ್’ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಕೌಸ್ತುಭ ಮಣಿ ಹಾಗೂ ಜಿಶು ಸೇನ್ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಕೇವಲ ಕಮರ್ಷಿಯಲ್ ಸಿನಿಮಾ ಮಾತ್ರವಲ್ಲದೆ, ಮನುಷ್ಯನ ಜೀವನದ ಆಳವಾದ ಮೌಲ್ಯಗಳನ್ನು ಚರ್ಚಿಸುವ ಕಥಾಹಂದರ ಹೊಂದಿದೆ. ಸಾಮಾನ್ಯ ಮನುಷ್ಯ ಎದುರಿಸುವ ಸವಾಲುಗಳು, ನಂಬಿಕೆ ಮತ್ತು ಭಯದ ನಡುವಿನ ಸಂಘರ್ಷ ಹಾಗೂ ಒಳ್ಳೆಯದು-ಕೆಟ್ಟದ್ದರ ನಡುವಿನ ಯುದ್ಧವನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ.

ಚಿತ್ರದ ಒಟಿಟಿ ಬಿಡುಗಡೆ ಕುರಿತು ಹರ್ಷ ವ್ಯಕ್ತಪಡಿಸಿರುವ ಶಿವರಾಜ್‌ಕುಮಾರ್, “ನಮ್ಮ ಜೀವನದ ಆಯ್ಕೆಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಬಿಂಬಿಸುವ ಕಥೆ ಇದಾಗಿದೆ. ಹೊಸ ಪ್ರಯತ್ನಗಳಿಗೆ ಬೆನ್ನೆಲುಬಾಗಿರುವ ಜೀ5ನಲ್ಲಿ ಈ ಸಿನಿಮಾ ಮೂಡಿಬರುತ್ತಿರುವುದು ಸಂತೋಷ ತಂದಿದೆ” ಎಂದಿದ್ದಾರೆ.

ಇನ್ನು ನಟ ಉಪೇಂದ್ರ ಮಾತನಾಡಿ, “ತತ್ವ ಮತ್ತು ಧರ್ಮದ ಮೌಲ್ಯಗಳನ್ನು ಮನರಂಜನೆಯ ಮೂಲಕ ಇಲ್ಲಿ ಸಾದರಪಡಿಸಲಾಗಿದೆ. ಈ ಚಿತ್ರ ವೀಕ್ಷಕರಿಗೆ ಕೇವಲ ಎಂಟರ್ಟೈನ್ಮೆಂಟ್ ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಗೂ ಡಬ್ ಆಗಿರುವ ಈ ಚಿತ್ರವನ್ನು, ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲೇ ಕುಳಿತು ಎಂಜಾಯ್ ಮಾಡಬಹುದು.

Must Read

error: Content is protected !!