ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಬಾರಿ ಮಿಸ್ ಆಗಿತ್ತು, ಆದ್ರೆ ಈ ಬಾರಿ ಬುಲೆಟ್ ಮಿಸ್ ಆಗಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಬೆದರಿಕೆ ಹಾಕಿದೆ.
ಆ ದೇಶದ ಸರ್ಕಾರಿ ಟಿವಿ ಚಾನೆಲ್ ನಲ್ಲಿ ಇಂಥದ್ದೊಂದು ಸಂದೇಶವಿರುವ ವಿಡಿಯೋವೊಂದು ಪ್ರಸಾರವಾಗಿದ್ದು, ಇದು ಈಗಾಗಲೇ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹಾಳುಗೆಡಲು ಸಹಾಯ ಮಾಡಲಿದೆ.
2024 ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರ ಹತ್ಯೆ ಯತ್ನದ ತುಣುಕುಗಳನ್ನು ಪ್ರದರ್ಶಿಸಿದ ಇರಾನಿನ ಸರ್ಕಾರಿ ಟಿವಿಯಲ್ಲಿ ಒಂದು ಎಚ್ಚರಿಕೆ ಪ್ರಸಾರವಾಯಿತು. ಈ ಬಾರಿ ಬುಲೆಟ್ ಮಿಸ್ ಆಗಲ್ಲ ಎಂದು ಇರಾನ್ ಹೇಳಿದೆ.
2024ರ ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ, ಟ್ರಂಪ್ ಅವರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದ. ಬುಲೆಟ್ ಟ್ರಂಪ್ ಅವರ ಕಿವಿಗೆ ತಾಗಿತ್ತು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ದಾಳಿಯ ನಂತರ, ರಿಪಬ್ಲಿಕನ್ ನಾಯಕ ರಕ್ತಸಿಕ್ತವಾಗಿ ವೇದಿಕೆಯಿಂದ ಇಳಿದು ಘೋಷಣೆಗಳನ್ನು ಕೂಗಿದ್ದರು. ಇದೀಗ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಬೆದರಿಕೆ ಬಂದಿದೆ.


