Sunday, September 7, 2025

ಕೈವ್‌ನಲ್ಲಿ ರಷ್ಯಾದಿಂದ ಕ್ಷಿಪಣಿ ದಾಳಿ: 3 ಸಾವು, 18 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ–ಉಕ್ರೇನ್ ಯುದ್ಧ ಮತ್ತೊಮ್ಮೆ ತೀವ್ರಗೊಂಡಿದ್ದು, ಉಕ್ರೇನ್ ರಾಜಧಾನಿ ಕೈವ್‌ನ ಪೆಚೆರ್ಸ್ಕಿ ಜಿಲ್ಲೆಯ ಸರ್ಕಾರಿ ಕಟ್ಟಡದ ಮೇಲೆ ರಷ್ಯಾ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಿಂದ ಕಟ್ಟಡದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿ, ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಕೈವ್‌ನ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಮಾಹಿತಿ ನೀಡಿದ್ದು, ಮೊದಲಿಗೆ ಡ್ರೋನ್ ದಾಳಿ ನಡೆದಿದ್ದು, ಬಳಿಕ ಕ್ಷಿಪಣಿ ದಾಳಿಯಿಂದ ಸರ್ಕಾರಿ ಮತ್ತು ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ದಾರ್ನಿಟ್ಸ್‌ಕಿ ಜಿಲ್ಲೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿಯಾಗಿದ್ದು, ಸ್ವಿಯಾಟೋಶಿನ್ಸ್ಕಿ ಜಿಲ್ಲೆಯ ಒಂಬತ್ತು ಮತ್ತು 16 ಅಂತಸ್ತಿನ ಕಟ್ಟಡಗಳಿಗೂ ಭಾರೀ ಹಾನಿಯಾಗಿದೆ. ಗಾಯಗೊಂಡವರಲ್ಲಿ ಗರ್ಭಿಣಿಯೊಬ್ಬರು ಸೇರಿದ್ದು, ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಘಟನೆಗಳು ಶಾಂತಿ ಮಾತುಕತೆಗಳು ವಿಫಲವಾದ ಬಳಿಕ ನಡೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಹೆಚ್ಚುವರಿ ಒತ್ತಡ ಉಂಟಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಈ ದಾಳಿಗಳನ್ನು ರಷ್ಯಾದ “ಶಾಂತಿ ಮಾತುಕತೆಗಳ ನಿರಾಕರಣೆ” ಎಂದು ಟೀಕಿಸಿದ್ದು, ಯುರೋಪಿಯನ್ ಒಕ್ಕೂಟ ಮತ್ತು ಯುಕೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಇದನ್ನೂ ಓದಿ