April 10, 2026
Friday, April 10, 2026
spot_img

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ: 1500 ಅಡಿ ಪ್ರಪಾತದಲ್ಲಿತ್ತು ಮೃತದೇಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದತ್ತಪೀಠದ ತಪ್ಪಲಿನಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ.

ಪಾಲಕ್ಕಾಡ್ ಮೂಲದ ಬಾಲಕಿ ಶವವು ಅರಿಶಿನಗುಪ್ಪಿ ಭಾಗದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ 1500 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.

ಮಂಗಳವಾರ ಸಂಜೆ ಮಾಣಿಕ್ಯಾಧಾರ ಜಲಪಾತ ವೀಕ್ಷಣೆಗೆ ಕುಟುಂಬದವರೊಂದಿಗೆ ತೆರಳಿದ್ದ ವೇಳೆ ಬಾಲಕಿ ಕಾಣೆಯಾಗಿದ್ದಳು. ಹಂಪಿ ಪ್ರವಾಸ ಮುಗಿಸಿಕೊಂಡು 41 ಕುಟುಂಬ ಸದಸ್ಯರೊಂದಿಗೆ ಚಿಕ್ಕಮಗಳೂರಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೆಲವೇ ನಿಮಿಷಗಳ ಮೊದಲು ತಂದೆಯ ಮೊಬೈಲ್‌ನಲ್ಲಿ ಸಂತೋಷದಿಂದ ರೀಲ್ಸ್ ಚಿತ್ರೀಕರಿಸಿದ್ದಳು ಎಂಬ ಮಾಹಿತಿ ಕುಟುಂಬದವರಿಂದ ಲಭ್ಯವಾಗಿತ್ತು.

ಇದನ್ನೂ ಓದಿ:

ಜನಸಂದಣಿಯ ನಡುವೆ ಮೆಟ್ಟಿಲು ಇಳಿದು ಬರುತ್ತಿದ್ದ ಸಂದರ್ಭದಲ್ಲಿ ಹಠಾತ್ ಬಾಲಕಿ ಕಾಣೆಯಾಗಿದ್ದರಿಂದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಕ್ಕೆ ಇಳಿದಿದ್ದರು.

ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಲವು ತಂಡಗಳಾಗಿ ವಿಭಜನೆಗೊಂಡು ಥರ್ಮಲ್ ಡ್ರೋನ್‌ಗಳ ಸಹಾಯದಿಂದ ಹುಡುಕಾಟ ನಡೆಸಿದ್ದರು. ಬಾಲಕಿ ಕಾಣೆಯಾದ ಪ್ರದೇಶ ತೀವ್ರ ಕಡಿದಾದ ಬೆಟ್ಟ ಪ್ರದೇಶವಾಗಿದ್ದರಿಂದ ಶೋಧ ಕಾರ್ಯ ಬಹಳ ಕಷ್ಟಕರವಾಗಿತ್ತು.

ಅಂತಿಮವಾಗಿ ದುರದೃಷ್ಟವಶಾತ್ ಬಾಲಕಿ ಸುರಕ್ಷಿತವಾಗಿ ಪತ್ತೆಯಾಗದೆ ಮೃತದೇಹವಾಗಿ ಸಿಕ್ಕಿರುವುದು ಕುಟುಂಬಸ್ಥರು ಮತ್ತು ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !