March 31, 2026
Tuesday, March 31, 2026
spot_img

‘ಮಿಷನ್ ಏಡ್ಸ್ ಸುರಕ್ಷಾ’: 2027ರ ಡಿಸೆಂಬರ್‌ 1ರೊಳಗೆ ಭಾರತವಾಗಲಿದೆ ಎಚ್ಐವಿ ಮುಕ್ತ ರಾಷ್ಟ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವನ್ನು 2027ರ ಡಿಸೆಂಬರ್‌ 1ರೊಳಗೆ (ವಿಶ್ವ ಏಡ್ಸ್‌ ದಿನ) ಎಚ್ಐವಿ ಮುಕ್ತ ರಾಷ್ಟ್ರವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮಹಾನಿರ್ದೇಶಕ ಡಾ. ರಾಕೇಶ್ ಗುಪ್ತಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ಆಯೋಜಿಸಿದ್ದ ‘ಸುರಕ್ಷಾ ಸಂಕಲ್ಪ ಕಾರ್ಯಗಾರ’ದಲ್ಲಿ ಮಾತನಾಡಿದ ಅವರು, 2027ರ ಡಿಸೆಂಬರ್ 1ರೊಳಗೆ ದೇಶವನ್ನು ಎಚ್ಐವಿ ಮುಕ್ತವಾಗಿಸಲು ಕೇಂದ್ರ ಸರ್ಕಾರವು ‘ಮಿಷನ್ ಏಡ್ಸ್ ಸುರಕ್ಷಾ’ ಮೂಲಕ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜಾಗತಿಕ ಗುರಿಗಳಾದ 95-95-99 ಸಾಧಿಸುವ ಗುರಿ ಹೊಂದಿದೆ. ಹೆಚ್ಚಿನ ಎಚ್ಐವಿ ಪ್ರಭಾವ ಮತ್ತು ಸೋಂಕಿನ ಪ್ರಮಾಣವಿರುವ 219 ಆದ್ಯತೆಯ ಜಿಲ್ಲೆಗಳನ್ನು ದೇಶಾದ್ಯಂತ ಗುರುತಿಸಲಾಗಿದೆ. ಸೋಂಕಿನ ಪ್ರಮಾಣ, ಪ್ರಸ್ತುತತೆ, ರೋಗದ ಹೊರೆ ಮತ್ತು ಹೆಚ್ಚಿನ ಅಪಾಯದ ಗುಂಪುಗಳ ಆಧಾರದ ಮೇಲೆ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಎಚ್ಐವಿ ಪ್ರಸ್ತುತತೆ 0.44% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಯಾದ 0.2% ಗಿಂತ ಹೆಚ್ಚಿದೆ. ರಾಜ್ಯದಲ್ಲಿ ಸುಮಾರು 2.91 ಲಕ್ಷ ಜನರು ಎಚ್ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ವಾರ್ಷಿಕ ಸುಮಾರು 4,700 ಹೊಸ ಎಚ್ಐವಿ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ 31 ಜಿಲ್ಲೆಗಳಲ್ಲಿ ಈ ಮಿಷನ್ ಜಾರಿಯಲ್ಲಿದ್ದರೂ, 27 ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಅಲ್ಲಿ ಹೆಚ್ಚಿನ ಗಮನಹರಿಸಲಾಗುತ್ತಿದೆ. ಕಾರವಾರ, ಉಡುಪಿ, ಕೊಪ್ಪಳ, ಮಂಡ್ಯ ಮೊದಲ ’95’ ಗುರಿಯನ್ನು ಸಾಧಿಸಿದ್ದರೆ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳು ಎರಡನೇ ’95’ ಗುರಿಯನ್ನು ಸಾಧಿಸಿವೆ” ಎಂದು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳು ಶೀಘ್ರದಲ್ಲೇ ಈ ಸಾಧನೆ ಮಾಡಲಿವೆ ಎಂಬುದು ಸಂತಸದ ವಿಚಾರ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !