January19, 2026
Monday, January 19, 2026
spot_img

T20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮಿಚೆಲ್ ಸ್ಟಾರ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಪ್ರಮುಖ ವೇಗಿ ಬೌಲರ್ ಮಿಚೆಲ್ ಸ್ಟಾರ್ಕ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌ಗಳು ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲು ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಸ್ಟಾರ್ಕ್ ತಮ್ಮ ವೃತ್ತಿಜೀವನದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ ಬಳಿಕ 13 ವರ್ಷಗಳ ಬಳಿಕ ಈ ಮಾದರಿಯಿಂದ ದೂರ ಸರಿದಿದ್ದಾರೆ.

“ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತೇನೆ. ನನ್ನ ಮೊದಲ ಆದ್ಯತೆ ಯಾವತ್ತಿದ್ದರೂ ಟೆಸ್ಟ್ ಕ್ರಿಕೆಟ್. ಜೊತೆಗೆ 2027ರ ಏಕದಿನ ವಿಶ್ವಕಪ್‌ಗಾಗಿ ಸಜ್ಜಾಗಲು ಈ ನಿರ್ಧಾರ ಮಾಡಿದ್ದೇನೆ” ಎಂದು ಸ್ಟಾರ್ಕ್ ತಿಳಿಸಿದ್ದಾರೆ.

ಸ್ಟಾರ್ಕ್ ಆಸ್ಟ್ರೇಲಿಯಾ ಪರ ಒಟ್ಟು 65 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಬೌಲಿಂಗ್ ಶಕ್ತಿ ತಂಡಕ್ಕೆ ನಿರ್ಣಾಯಕ ಕ್ಷಣಗಳಲ್ಲಿ ಗೆಲುವು ತಂದುಕೊಟ್ಟಿದೆ.

65 ಪಂದ್ಯಗಳಲ್ಲಿ ಒಟ್ಟು 1458 ಎಸೆತಗಳನ್ನು ಎಸೆದ ಸ್ಟಾರ್ಕ್, 1881 ರನ್ ನೀಡಿ 79 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಸ್ಟಾರ್ಕ್ ಈಗ ತಮ್ಮ 35ನೇ ವಯಸ್ಸಿನಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್ ಸೇರಿದಂತೆ ಜಾಗತಿಕ ಮಟ್ಟದ ಟಿ20 ಲೀಗ್‌ಗಳಲ್ಲಿ ಅವರನ್ನು ಅಭಿಮಾನಿಗಳು ಇನ್ನೂ ನೋಡಬಹುದಾಗಿದೆ.

Must Read