Tuesday, November 25, 2025

ಆ್ಯಶಸ್ ನಲ್ಲಿ ಮಿಚೆಲ್ ಸ್ಟಾರ್ಕ್ ಅಬ್ಬರ: ಪರ್ತ್ ಟೆಸ್ಟ್‌ನಲ್ಲಿ ದಾಖಲೆಗಳ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರ್ತ್‌ನ ಆಪ್ಟಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ–ಇಂಗ್ಲೆಂಡ್ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅದ್ಭುತ ಬೌಲಿಂಗ್ ಶೈಲಿಯಿಂದ ಕ್ರೀಡಾಪ್ರಿಯರ ಗಮನ ಸೆಳೆದಿದ್ದಾರೆ. ಎರಡು ಇನ್ನಿಂಗ್ಸ್‌ಗಳನ್ನು ಸೇರಿ 10 ವಿಕೆಟ್‌ಗಳನ್ನು ಕಬಳಿಸಿರುವ ಸ್ಟಾರ್ಕ್, ಆ್ಯಶಸ್ ಆರಂಭದಲ್ಲೇ ತನ್ನ ದಾಳಿಯಿಂದ ಮ್ಯಾಚ್‌ನ ಚಿತ್ರಣವನ್ನೇ ತಿರುಗಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಪಡೆದ ಸ್ಟಾರ್ಕ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿ 10 ವಿಕೆಟ್‌ಗಳ ಮೈಲಿಗಲ್ಲು ದಾಟಿದ್ದಾರೆ. 35 ವರ್ಷದ ಈ ಆಸ್ಟ್ರೇಲಿಯನ್ ಪೇಸರ್ ಇದುವರೆಗೆ 101 ಟೆಸ್ಟ್‌ಗಳಲ್ಲಿ 412 ವಿಕೆಟ್‌ಗಳನ್ನು ಪಡೆದಿದ್ದಾರೆ. 58 ರನ್‌ಗಳಿಗೆ 7 ವಿಕೆಟ್‌ಗಳು ಅವರ ಅತ್ಯುತ್ತಮ ಟೆಸ್ಟ್ ಪ್ರದರ್ಶನ.

ಸ್ಟಾರ್ಕ್ ಈ ಪಂದ್ಯದಲ್ಲಿ ಮತ್ತೊಂದು ಪ್ರಮುಖ ದಾಖಲೆ ಬರೆಯುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್ ನಂತರ ಈ ಸಾಧನೆ ಮಾಡಿದ ಮೂರನೇ ಆಸೀಸ್ ಬೌಲರ್ ಎಂಬ ಹೆಗ್ಗಳಿಕೆ ಸ್ಟಾರ್ಕ್‌ಗೆ ಸಿಕ್ಕಿದೆ.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವಿಕೆಟ್ ಪಟ್ಟಿಯಲ್ಲಿ ನಾಥನ್ ಲಿಯಾನ್ 219 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಪ್ಯಾಟ್ ಕಮ್ಮಿನ್ಸ್ 215 ವಿಕೆಟ್‌ಗಳೊಂದಿಗೆ ಎರಡನೇ, ಸ್ಟಾರ್ಕ್ 201 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಪ್ರಮುಖ ವೇಗದ ಬೌಲರ್‌ಗಳ ಸಾಲಿನಲ್ಲಿ ಸ್ಟಾರ್ಕ್ ಮತ್ತೊಂದು ಉಜ್ವಲ ಸಾಧನೆ ಮಾಡಿದ್ದಾರೆ.

error: Content is protected !!