ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಭಾರತ ಒಂಬತ್ತನೇ ಬಾರಿಗೆ ಟೂರ್ನಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಗೆಲುವನ್ನು ಆಪರೇಷನ್ ಸಿಂದೂರ್‌ಗೆ ಲಿಂಕ್ ಮಾಡಿ ಭಾರತೀಯ ಕ್ರಿಕೆಟಿಗರನ್ನು ಅಭಿನಂದಿಸಿದ್ದರು. ಇದೀಗ ಮೋದಿ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್, ದೇಶದ ನಾಯಕರೇ ಮುಂದೆ ನಿಂತು ಬ್ಯಾಟಿಂಗ್ ಮಾಡುತ್ತಿರುವುದು ಒಳ್ಳೇಯ ಸಂಗತಿಯಾಗಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ, ‘ಆಟದ ಮೈದಾನದಲ್ಲಿಯೂ ಆಪರೇಷನ್ ಸಿಂದೂರ್. ಇಲ್ಲಿಯೂ ಸಹ ಫಲಿತಾಂಶ ಒಂದೇ ಆಗಿದ್ದು, ಭಾರತ ಗೆಲುವು ಸಾಧಿಸಿದೆ. ಇದಕ್ಕಾಗಿ ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದರು.
ಪ್ರಧಾನಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್, ‘ದೇಶದ ನಾಯಕರೇ ಮುಂದೆ ನಿಂತು ಬ್ಯಾಟಿಂಗ್ ಮಾಡುತ್ತಿರುವುದು ಒಳ್ಳೆಯ ಸಂಗತಿ. ಅವರೇ ಸ್ಟ್ರೈಕ್ ತೆಗೆದುಕೊಂಡು ರನ್ ಗಳಿಸುತ್ತಿರುವಂತೆ ಭಾಸವಾಗುತ್ತಿದೆ. ಅದನ್ನು ನೋಡಲು ಅದ್ಭುತವಾಗಿತ್ತು. ಸರ್ ಮುಂದೆ ನಿಂತಾಗ, ಖಂಡಿತವಾಗಿಯೂ ಆಟಗಾರರು ಮುಕ್ತವಾಗಿ ಆಡುತ್ತಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇಡೀ ದೇಶ ಆಚರಿಸುತ್ತಿದೆ. ನಾವು ಭಾರತಕ್ಕೆ ಹಿಂತಿರುಗಿದಾಗ ಸಂಭ್ರಮವನ್ನು ನೋಡಲು ಇನ್ನಷ್ಟು ಚೆನ್ನಾಗಿರುತ್ತದೆ. ಮುಂದೆ ಇದೇ ರೀತಿಯ ಪ್ರದರ್ಶನ ನೀಡಲು ನಮಗೆ ಹೆಚ್ಚಿನ ಸ್ಫೂರ್ತಿ ಮತ್ತು ಪ್ರೇರಣೆ ಸಿಗುತ್ತದೆ ಎಂದಿದ್ದಾರೆ.