ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಿಕ್ಕಮಗಳೂರಿನ ಕಾಫಿ ಕೃಷಿಯನ್ನು ಕೊಂಡಾಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಕಾಫಿಯು ವಿಶ್ವಾದ್ಯಂತ ಜನಪ್ರಿಯತೆ ಗಳಿಸುತ್ತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
127ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರು ಹಲವು ವಿಚಾರದ ಬಗ್ಗೆ ಪಸ್ತಾಪಿಸಿದರು. ಕರ್ನಾಟಕದ ಕಾಫಿ ಬಗ್ಗೆ ಮಾತ್ರವಲ್ಲದೆ, ಛತ್ತೀಸ್‌ಗಢದಿಂದ ಬೆಂಗಳೂರಿಗೆ ಬಂದು ಇಲ್ಲಿ ತಾವು ಓಡಾಡುವ ಸ್ಥಳದಲ್ಲಿ ಸಸಿ ಪೋಷಣೆ ಮಾಡುತ್ತಿರುವ ಕಪಿಲ್ ಶರ್ಮಾರ ಸಾಧನೆಯನ್ನು ಶ್ಲಾಘಿಸಿದರು.
ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಉತ್ತಮ ಮತ್ತು ಪ್ರಥಮ ದರ್ಜೆಯ ಕಾಫಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇಕಡ 70ರಷ್ಟು ಪಾಲು ಕರ್ನಾಟಕದ್ದಾಗಿದೆ ಎಂಬುದು ಗಮನಾರ್ಹ. ಭಾರತದಲ್ಲಿ ಪ್ರಮುಖವಾಗಿ ಅರೇಬಿಕಾ ಹಾಗೂ ರೊಬೊಸ್ಟಾ ತಳಿಯ ಕಾಫಿಯನ್ನು ಬೆಳೆಯಲಾಗುತ್ತದೆ ಎಂದರು.
ಪ್ರಧಾನಿ ಮೋದಿಯವರು ಬೆಂಗಳೂರಿನ ಪರಿಸರವಾದಿ ಕಪಿಲ್ ಶರ್ಮಾ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಕಪಿಲ್ ಶರ್ಮ ಅವರು ಛತ್ತೀಸ್‌ಗಢದಿಂದ ಹಲವಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು. ನಂತರ ಅವರು ‘ಸೇ ಟ್ರೀಸ್’ ಎಂಬ ಎನ್‌ಜಿಒ ಮೂಲಕ ನಗರದ ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಗಳೂರಿನ 6 ಕೆರೆಗಳು ಮತ್ತು 40 ಬಾವಿಗಳಿಗೆ ಮರುಜೀವ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಚಿಕ್ಕಮಗಳೂರಿನ ಕಾಫಿಯನ್ನು ಹೊಗಳಿದ ಮೋದಿ, ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಹೇಳಿದ್ದೇನು?

