April 9, 2026
Thursday, April 9, 2026
spot_img

ಬಂಗಾಳ ಚುನಾವಣಾ ಕಣದಲ್ಲಿ ಮೋದಿ ಅಬ್ಬರ: ಟಿಎಂಸಿ ವಿರುದ್ಧ ‘ಆರು ಗ್ಯಾರಂಟಿ’ಗಳ ಅಸ್ತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಸರ್ಕಾರದ ಏಕೈಕ ಗುರಿ “ಲೂಟಿ ಮತ್ತು ಹಣ ಕಡಿತ” ಎಂದು ಟೀಕಿಸಿದ ಅವರು, ಬಂಗಾಳದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯ ‘ಡಬಲ್ ಎಂಜಿನ್’ ಸರ್ಕಾರವನ್ನು ತರುವಂತೆ ಜನರಲ್ಲಿ ಮನವಿ ಮಾಡಿದರು.

ಬಂಗಾಳವನ್ನು ಮೀನುಗಾರಿಕೆ ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರಬೇಕು ಎಂದು ಅವರು ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ಬಂಗಾಳದ ಜನತೆಗಾಗಿ ಪ್ರಧಾನಿ ‘ಆರು ಗ್ಯಾರಂಟಿ’ಗಳನ್ನು ಘೋಷಿಸಿದರು.

ಗ್ಯಾರಂಟಿ 1:
ರಾಜ್ಯದಲ್ಲಿ ಟಿಎಂಸಿ ಹರಡಿರುವ ಭಯದ ವಾತಾವರಣವನ್ನು ಕೊನೆಗೊಳಿಸಿ, ಜನರಲ್ಲಿ ನಂಬಿಕೆ ಮತ್ತು ಸುರಕ್ಷತೆಯ ಭಾವನೆ ಮೂಡಿಸುವುದು ಬಿಜೆಪಿಯ ಮೊದಲ ಆದ್ಯತೆ ಎಂದರು.

ಗ್ಯಾರಂಟಿ 2:
ಸರ್ಕಾರಿ ವ್ಯವಸ್ಥೆಯು ಜನರಿಗೆ ಸೇವೆ ಸಲ್ಲಿಸುವ ಹೊಣೆ ಹೊರಲಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಳೆಯ ಫೈಲ್‌ಗಳನ್ನು ಹೊರತೆಗೆದು ತನಿಖೆ ನಡೆಸಲಾಗುವುದು.

ಗ್ಯಾರಂಟಿ 3:
ಹೆಣ್ಣುಮಕ್ಕಳ ವಿರುದ್ಧ ನಡೆದ ಹಗರಣಗಳು ಮತ್ತು ಅನ್ಯಾಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ಮರುತನಿಖೆ ನಡೆಯಲಿದೆ.

ಗ್ಯಾರಂಟಿ 4:
ಭ್ರಷ್ಟಾಚಾರದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಯಾಗಿದ್ದರೂ, ಮಂತ್ರಿಯಾಗಿದ್ದರೂ ಅವರಿಗೆ ಜೈಲು ಶಿಕ್ಷೆ ಖಚಿತ ಎಂದು ಮೋದಿ ಎಚ್ಚರಿಕೆ ನೀಡಿದರು.

ಗ್ಯಾರಂಟಿ 5:
ನಿರಾಶ್ರಿತರಿಗೆ ಸಂವಿಧಾನದ ಅಡಿಯಲ್ಲಿ ಎಲ್ಲಾ ಹಕ್ಕುಗಳನ್ನು ನೀಡಲಾಗುವುದು. ಆದರೆ, ಅಕ್ರಮವಾಗಿ ನುಸುಳುವವರನ್ನು ರಾಜ್ಯದಿಂದ ಹೊರಹಾಕಲಾಗುವುದು.

ಗ್ಯಾರಂಟಿ 6:
ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಬಂಪರ್ ಕೊಡುಗೆ ಘೋಷಿಸಿದ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ 7ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !