ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ಮೋಹನ್‌ಲಾಲ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻದೃಶ್ಯಂ 3ʼ ಶೂಟಿಂಗ್ ಮುಕ್ತಾಯವಾಗಿದೆ. ಅಚ್ಚರಿ ಎಂದರೆ, ಈ ಚಿತ್ರದ ಚಿತ್ರೀಕರಣವನ್ನು ಕೇವಲ 54 ದಿನಗಳಲ್ಲಿ ಮುಗಿಸಿರುವುದು ವಿಶೇಷ.
ಜೀತು ಜೋಸೆಫ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಏಪ್ರಿಲ್ ವೇಳೆಗೆ ತೆರೆಗೆ ತರುವುದಕ್ಕೆ ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
‘ದೃಶ್ಯಂ 3ʼ ಸಿನಿಮಾದ ಶೂಟಿಂಗ್ ಶುರುವಾಗಿದ್ದು ಸೆಪ್ಟೆಂಬರ್ 22ರಂದು. ಸಿನಿಮಾದ ಶೂಟಿಂಗ್ ಮುಗಿದಿದ್ದು ಡಿಸೆಂಬರ್ 3ರಂದು. ಇದರಲ್ಲಿ ವಿವಿಧ ಶೆಡ್ಯೂಲ್‌ಗಳಲ್ಲಿ ಒಟ್ಟು 54 ದಿನಗಳಲ್ಲಿ ʻದೃಶ್ಯಂ 3ʼ ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ.
ಬೆರಗು ಮೂಡಿಸಿದ ಪ್ರೀ-ರಿಲೀಸ್ ಬ್ಯುಸಿನೆಸ್
2013ರಲ್ಲಿ ʻದೃಶ್ಯಂʼ ಸಿನಿಮಾವನ್ನು 3-4 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆ ಚಿತ್ರ 60 ಕೋಟಿ ರೂ. ಮೇಲೆ ಗಳಿಕೆ ಮಾಡಿತ್ತು. ನಂತರ 2021ರಲ್ಲಿ ʻದೃಶ್ಯಂ 2ʼ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಅಚ್ಚರಿ ಎಂದರೆ, ಹಿಂದಿಯಲ್ಲಿ ಈ ಎರಡು ಚಿತ್ರಗಳನ್ನು ರಿಮೇಕ್ ಮಾಡಿ, 500 ಕೋಟಿ ರೂ. ಮೇಲೆ ವ್ಯವಹಾರ ಮಾಡಲಾಗಿದೆ. ಇದೀಗ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ದೇಶಕ ಜೀತು ಜೋಸೆಫ್ ಅವರು ʻದೃಶ್ಯಂ 3ʼ ಸಿನಿಮಾವನ್ನು ರೆಡಿ ಮಾಡಿದ್ದಾರೆ.
ಮೂಲಗಳ ಪ್ರಕಾರ, ʻದೃಶ್ಯಂ 3ʼ ಸಿನಿಮಾವು ರಿಲೀಸ್‌ಗೂ ಮುನ್ನವೇ 350 ಕೋಟಿ ರೂ. ವ್ಯವಹಾರ ಮಾಡಿದೆ ಎಂಬ ಮಾಹಿತಿ ಇದೆ. ರಿಮೇಕ್ ಹಕ್ಕುಗಳು, ವಿತರಣಾ ಹಕ್ಕುಗಳು, ಒಟಿಟಿ, ಸ್ಯಾಟಲೈಟ್ ಹಕ್ಕುಗಳಿಂದಲೇ ಇಷ್ಟೊಂದು ದೊಡ್ಡ ಮೊತ್ತವು ನಿರ್ಮಾಪಕರಿಗೆ ಸಿಕ್ಕಿದೆ. ಪನೋರಮಾ ಸ್ಟುಡಿಯೋಸ್ ಸಂಸ್ಥೆಯು ʻದೃಶ್ಯಂ 3ʼ ಚಿತ್ರದ ವಿಶ್ವಾದ್ಯಂತ ರಿಲೀಸ್ ಹಕ್ಕುಗಳು, ಹಿಂದಿ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಿದೆ. ಬಾಲಿವುಡ್ ನಟ ಅಜಯ್ ದೇವ್‌ಗನ್ ನಾಯಕತ್ವದಲ್ಲಿ ಶೀಘ್ರದಲ್ಲೇ ʻದೃಶ್ಯಂ 3ʼ ಶುರುವಾಗುವ ಸಾಧ್ಯತೆ ಇದೆ.

