ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳದ ಖ್ಯಾತ ನಟ ಮೋಹನ್ ಲಾಲ್ ಗೆ ಕೇರಳ ಸರ್ಕಾರ ನೀಡಿದ್ದ ಆನೆ ದಂತಗಳ (Elephant Tusk) ಮಾಲೀಕತ್ವ ಪರವಾನಗಿಯನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಅಕ್ರಮವಾಗಿ ನೀಡಲಾದ ಪರವಾನಗಿಯು ಕಾನೂನುಬಾಹಿರ ಎಂದು ನ್ಯಾಯಮೂರ್ತಿಗಳಾದ ಜಯಶಂಕರನ್ ನಂಬಿಯಾರ್ ಮತ್ತು ಜೋಬಿನ್ ಸೆಬಾಸ್ಟಿಯನ್ ಅವರ ತೀರ್ಪು ಸ್ಪಷ್ಟಪಡಿಸಿದೆ.
2011ರಲ್ಲಿ ಎರ್ನಾಕುಲಂನಲ್ಲಿರುವ ಮೋಹನ್ ಲಾಲ್ ಅವರ ಮನೆಯಲ್ಲಿ ಅರಣ್ಯ ಇಲಾಖೆ ದಾಳಿ ನಡೆಸಿ, ಪರವಾನಗಿಯಿಲ್ಲದ ನಾಲ್ಕು ಆನೆ ದಂತಗಳು ಹಾಗೂ 13 ದಂತ ಕಲಾಕೃತಿಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ನಟ ಕೇರಳದ ಆಗಿನ ಅರಣ್ಯ ಸಚಿವರ ಮೂಲಕ ಆನೆದಂತಗಳನ್ನು ಹಸ್ತಾಂತರಿಸುವಂತೆ ವಿನಂತಿಸಿದ್ದರು. 2015ರಲ್ಲಿ ಸರ್ಕಾರ ಅವರು ಆ ದಂತಗಳನ್ನು ಹೊಂದಲು ಅಧಿಕೃತ ಪರವಾನಗಿ ನೀಡಿ ಪ್ರಕರಣವನ್ನೂ ರದ್ದುಗೊಳಿಸಿತ್ತು.
ಆದರೆ, ಮಾಜಿ ಅರಣ್ಯ ಅಧಿಕಾರಿ ಜೇಮ್ಸ್ ಮ್ಯಾಥ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಈ ಪರವಾನಗಿ ನೀಡುವ ಪ್ರಕ್ರಿಯೆ ಕಾನೂನುಬಾಹಿರ ಎಂದು ಪ್ರಶ್ನಿಸಿದ್ದರು. ಅವರು ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ನಿಯಮಗಳನ್ನು ಉಲ್ಲಂಘಿಸಿ ಪ್ರಮಾಣಪತ್ರ ನೀಡಲಾಗಿದೆ ಎಂದು ಆರೋಪಿಸಿದರು.
ವಿಚಾರಣೆಯಲ್ಲಿ, ಸರ್ಕಾರ ನೀಡಿದ ಪರವಾನಗಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾಗಿರಲಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಹೈಕೋರ್ಟ್ ಪರವಾನಗಿಯನ್ನು ತಕ್ಷಣದ ಪರಿಣಾಮದಿಂದ ರದ್ದುಗೊಳಿಸಿತು. ಜೊತೆಗೆ, ಮೋಹನ್ ಲಾಲ್ ಪರವಾಗಿ ನೀಡಲಾದ ಸರ್ಕಾರಿ ಆದೇಶವನ್ನೂ ವಜಾಗೊಳಿಸಲಾಯಿತು.
ಆದಾಗ್ಯೂ, ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಹೊಸ ಅಧಿಸೂಚನೆ ಮೂಲಕ ಕಾನೂನುಬದ್ಧವಾಗಿ ವಿನಾಯಿತಿ ನೀಡುವ ಅವಕಾಶವನ್ನು ನೀಡಿದೆ. ಈ ತೀರ್ಪಿನಿಂದ ಮೋಹನ್ ಲಾಲ್ ವಿರುದ್ಧದ “ಆನೆದಂತ ಪ್ರಕರಣ” ಮತ್ತೆ ಜೀವಂತಗೊಂಡಿದ್ದು, ನಟನಿಗೆ ಇದು ಕಾನೂನುಬದ್ಧ ಸವಾಲಾಗಿ ಪರಿಣಮಿಸಿದೆ.

