ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಸ್ನಾನ ಘಟ್ಟ ಸಮೀಪದ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಮಾನವ ಕಳೆಬರ ಹಾಗೂ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿವೆ ಎಂಬ ಮಾಹಿತಿ ಹರಿದಾಡುತ್ತಿರುವ ಬೆನ್ನಲ್ಲೇ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಇಂದು ಖುದ್ದು ಎಸ್‌ಐಟಿ ಬೆಳ್ತಂಗಡಿ ಕಚೇರಿಗೆ ಭೇಟಿ ನೀಡಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಮೊಹಂತಿ ಅವರ ಜೊತೆಯಲ್ಲಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್‌ಪಿ ಸೈಮನ್ ಕೂಡಾ ಆಗಮಿಸಿದ್ದು, ಇದುವರೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಸಭೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಮುಂದಿನ ‘ತಲೆ ಬುರುಡೆ’ ಕುರಿತಾದ ತನಿಖೆ ಇನ್ನಷ್ಟು ಚುರುಕುಗೊಳ್ಳಲಿರುವ ಮುನ್ಸೂಚನೆ ಸಿಕ್ಕಿದೆ.
ಕಳೆದ ಎರಡು ವಾರಗಳಿಂದ ಬಂಗ್ಲೆಗುಡ್ಡೆ ತಲೆಬುರುಡೆ ಸಂಬಂಧ ತನಿಖೆ ನಡೆದಿದ್ದು, ಸೌಜನ್ಯ ಅವರ ಸಂಬಂಧಿ ವಿಠಲ ಗೌಡ ಹಾಗೂ ಅವರ ಆಪ್ತ ಪ್ರದೀಪ್ ಗೌಡ ಅವರನ್ನು ಕರೆದೊಯ್ದು ಸ್ಥಳ ಮಹಜರು ಕೂಡಾ ನಡೆಸಲಾಗಿತ್ತು. ಜೊತೆಗೆ ಪ್ರದೀಪ್ ಗೌಡ ನ್ಯಾಯಾಧೀಶರ ಮುಂದೆ ಹೇಳಿಕೆ ಕೂಡಾ ದಾಖಲಿಸಿದ್ದರು. ಈ ನಡುವೆ ಮೊಹಂತಿ ಅವರ ಭೇಟಿ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.