ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ವಾರದಲ್ಲಿ ಹಣವನ್ನು ಡಬಲ್ ಮಾಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಕಸಿದುಕೊಂಡು ಆಂಧ್ರಪ್ರದೇಶ ಮೂಲದ ದಂಪತಿ ಪರಾರಿಯಾದ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಸುಲಭ ಲಾಭ ತೋರಿ ಜನರಲ್ಲಿ ನಂಬಿಕೆ ಮೂಡಿಸಿ ಬಳಿಕ ಪರಾರಿಯಾದ ಈ ದಂಪತಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಆಂಧ್ರದ ಅನಂತಪುರದ ಬೊಗ್ಗು ಶ್ರೀರಾಮಲು ಮತ್ತು ಪುಷ್ಪಾ ಎಂಬ ದಂಪತಿ ಜಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಸುತ್ತಾಡುತ್ತಾ ‘ಹಣ ಡಬ್ಲಿಂಗ್’ ಯೋಜನೆಗೆ ಜನರನ್ನು ಸೆಳೆದಿದ್ದರು. ತಮ್ಮ ಮನೆಯಲ್ಲಿ ನೋಟಿನ ಕಂತೆಗಳನ್ನು ಜೋಡಿಸಿದ ವೀಡಿಯೋ ಕಳುಹಿಸಿ ಜನರನ್ನು ಬಲೆಗೆ ಬೀಳುವಂತೆ ಮಾಡಿದ್ದಾರೆ. ಇವರ ಮಾತು ನಂಬಿ ರೇಣುಕಮ್ಮ ತಮ್ಮ ಜಮೀನು ಮಾರಾಟ ಮಾಡಿ 33 ಲಕ್ಷ ರೂ. ನೀಡಿದರೆ, ಮೀನಾ 40 ಲಕ್ಷ ರೂ. ಹಾಗೂ ಪ್ರಿಯಾಂಕ 50 ಲಕ್ಷ ರೂ. ನೀಡಿದ್ದಾರೆ. ಟಿ. ತಿರುಮಲೇಶ್ ಸಹ 17 ಲಕ್ಷ ರೂ. ನೀಡಿ ಮೋಸಕ್ಕೆ ಒಳಗಾಗಿದ್ದಾರೆ.
ಘಟನೆ ಬಳಿಕ ದಂಪತಿ ಗುರುತು ಮರೆಮಾಡಿಕೊಂಡಿದ್ದು, ವಂಚನೆಯೊಳಗಾದ ತಿರುಮಲೇಶ್ ಜಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಗಳ ಹುಡುಕಾಟ ತೀವ್ರಗೊಳಿಸಿದ್ದಾರೆ.

