ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ಹೆಚ್ಚು ಹಣದುಬ್ಬರ ಅನುಭವಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾದ ವೆನೆಜುವೆಲಾ ಇದೀಗ ಆರ್ಥಿಕ ಬಿಕ್ಕಟ್ಟಿನ ತೀವ್ರ ಹಂತಕ್ಕೆ ತಲುಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದು ಈ ಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ವೀಡಿಯೊದಲ್ಲಿ ನೂರಾರು ಜನರು ರಸ್ತೆಯ ಮಧ್ಯೆ ಸೇರಿಕೊಂಡು ನೋಟುಗಳ ಕಂತೆಗಳನ್ನು ಗಾಳಿಯಲ್ಲಿ ಎಸೆಯುತ್ತಿರುವುದು ಹಾಗೂ ಟ್ರಕ್‌ನೊಳಗಿದ್ದ ವ್ಯಕ್ತಿಯೊಬ್ಬರು ಹಣವನ್ನು ಜನರ ಮೇಲೆ ಎಸೆಯುತ್ತಿರುವುದು ಕಾಣಬಹುದು.
ಈ ದೃಶ್ಯವು ಕೇವಲ ಪ್ರತಿಭಟನೆಯ ಒಂದು ಭಾಗವಲ್ಲ, ದೇಶದ ಆರ್ಥಿಕ ಕುಸಿತದ ಸಂಕೇತವಾಗಿದೆ. ಅಧಿಕ ಹಣದುಬ್ಬರದಿಂದ ವೆನೆಜುವೆಲಾದ ಬೊಲಿವರ್ ಕರೆನ್ಸಿಯ ಮೌಲ್ಯ ಸಂಪೂರ್ಣ ಕುಸಿದಿದ್ದು, ನೋಟುಗಳು ಈಗ ಕೇವಲ ಕಾಗದದಂತೆ ತೋರುತ್ತಿವೆ. ವೀಡಿಯೊದಲ್ಲಿ ನೋಟುಗಳು ನೆಲದಾದ್ಯಂತ ಹರಡಿಕೊಂಡಿರುವುದನ್ನು ಕಾಣಬಹುದು, ಜನರು ಅದನ್ನು ಎತ್ತಿಕೊಳ್ಳಲು ಸಹ ಆಸಕ್ತಿ ತೋರಿಸುತ್ತಿಲ್ಲ.
ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಭಾರತದ 1 ರೂಪಾಯಿ = ವೆನೆಜುವೆಲಾದ 1,381 ಬೊಲಿವರ್‌ಗಳಷ್ಟಾಗಿದೆ. ಈ ಅಸಮಾನ ವಿನಿಮಯ ದರವು ದೇಶದ ಆರ್ಥಿಕ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಂಧನ ಸಂಪತ್ತಿನಲ್ಲೂ ಶ್ರೀಮಂತವಾಗಿರುವ ಈ ರಾಷ್ಟ್ರ ಇಂದು ಜನರ ಬದುಕು ಸಾಗಿಸಲು ಸಹ ಕಷ್ಟವಾಗುವ ಸ್ಥಿತಿಯಲ್ಲಿದೆ. ಹಣದ ಮೌಲ್ಯ ಶೂನ್ಯವಾದರೆ, ಜನರ ನಂಬಿಕೆಯೂ ಕುಸಿಯುತ್ತದೆ ಎಂಬ ಸತ್ಯವನ್ನು ವೆನೆಜುವೆಲಾದ ಈ ದೃಶ್ಯಗಳು ತೋರಿಸುತ್ತಿವೆ.

