Tuesday, October 21, 2025

ರಷ್ಯಾ ಮೂಲಕ ಮಂಗೋಲಿಯನ್ ಕಲ್ಲಿದ್ದಲು ಆಮದು: ಚೀನಾವನ್ನು ದೂರವಿಡುವ ಭಾರತದ ‘ರಣತಂತ್ರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಮಂಗೋಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಲು ತೆಗೆದುಕೊಂಡಿರುವ ಹೊಸ ನಿರ್ಧಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವೆಂದರೆ, ಈ ಆಮದು ಚೀನಾದ ಮೂಲಕವಲ್ಲ, ರಷ್ಯಾದ ಮಾರ್ಗದ ಮೂಲಕ ನಡೆಯಲಿದೆ. ಚೀನಾವನ್ನು ನೇರವಾಗಿ ಅವಲಂಬಿಸುವುದನ್ನು ತಪ್ಪಿಸಲು ಭಾರತ ಕೈಗೊಂಡಿರುವ ಈ ಕ್ರಮವನ್ನು ಕಾರ್ಯತಂತ್ರದ ಹೆಜ್ಜೆಯೆಂದು ವಿಶ್ಲೇಷಕರು ಪರಿಗಣಿಸುತ್ತಿದ್ದಾರೆ.

ಮಂಗಳವಾರ ಭಾರತ ಮತ್ತು ಮಂಗೋಲಿಯಾದ ನಡುವೆ ಹಲವು ಪ್ರಮುಖ ಒಪ್ಪಂದಗಳು ಸಹಿ ಆಗಿದ್ದು, ಇದರಲ್ಲಿ ತೈಲ ಸಂಸ್ಕರಣಾಗಾರ ಯೋಜನೆಗೆ ಹಣಕಾಸು, ಮಂಗೋಲಿಯನ್ ಸೈನಿಕರಿಗೆ ತರಬೇತಿ, ಉಚಿತ ಇ-ವೀಸಾ ವ್ಯವಸ್ಥೆ ಹಾಗೂ ಲಡಾಖ್ ಮತ್ತು ಮಂಗೋಲಿಯಾ ಪ್ರದೇಶಗಳ ನಡುವೆ ಸಾಂಸ್ಕೃತಿಕ ಸಹಕಾರ ಒಪ್ಪಂದವೂ ಸೇರಿದೆ. ಈ ಎಲ್ಲದರಲ್ಲಿ ಅತ್ಯಂತ ಗಮನಸೆಳೆಯುತ್ತಿರುವುದು ಕೋಕಿಂಗ್ ಕಲ್ಲಿದ್ದಲಿನ ಆಮದು ಯೋಜನೆ.

ಮಂಗೋಲಿಯಾದಲ್ಲಿ ಕಲ್ಲಿದ್ದಲಿನ ಅಪಾರ ನಿಕ್ಷೇಪಗಳಿದ್ದರೂ, ಅದು ಭೂಆವರಿತ ರಾಷ್ಟ್ರವಾಗಿರುವುದರಿಂದ ನೇರವಾಗಿ ಸಾಗಾಟ ಸಾಧ್ಯವಿಲ್ಲ. ಪ್ರಸ್ತುತ ಅದರ ಹೆಚ್ಚಿನ ಕಲ್ಲಿದ್ದಲು ಚೀನಾದ ಬಂದರುಗಳ ಮೂಲಕ ಸಾಗುತ್ತಿದೆ. ಆದರೆ ಲಡಾಖ್ ಗಡಿ ವಿವಾದದ ಬಳಿಕ ಭಾರತ ಚೀನಾದ ಬಂದರುಗಳ ಮೇಲೆ ಅವಲಂಬಿತವಾಗಿರಲು ಇಚ್ಛಿಸುತ್ತಿಲ್ಲ. ಈ ಕಾರಣಕ್ಕಾಗಿ, ರಷ್ಯಾದ ವ್ಲಾಡಿವೋಸ್ಟಾಕ್ ಬಂದರಿನ ಮೂಲಕ ಕಲ್ಲಿದ್ದಲನ್ನು ಆಮದು ಮಾಡುವ ಮಾರ್ಗವನ್ನು ಭಾರತ ಪರಿಶೀಲಿಸುತ್ತಿದೆ.

ಈ ಮಾರ್ಗವು ದೂರವಾದದ್ದರಿಂದ ಮತ್ತು ಖರ್ಚು ಹೆಚ್ಚು ಆಗುವ ಸಾಧ್ಯತೆಯಿದ್ದರೂ, ಭಾರತದ ದೃಷ್ಟಿಯಲ್ಲಿ ಇದು ಸುರಕ್ಷಿತ ಮತ್ತು ರಾಜತಾಂತ್ರಿಕವಾಗಿ ಸೂಕ್ತ ಆಯ್ಕೆಯೆಂದು ತಜ್ಞರು ಹೇಳುತ್ತಿದ್ದಾರೆ. ಚೀನಾದ ಪ್ರಭಾವದಿಂದ ದೂರವಿರುವ ಇಂಧನ ಪೂರೈಕೆ ಮಾರ್ಗವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತ ತನ್ನ ದೀರ್ಘಕಾಲದ ಕಾರ್ಯತಂತ್ರದ ಗುರಿ ಸಾಧಿಸಲು ಪ್ರಯತ್ನಿಸುತ್ತಿದೆ.

error: Content is protected !!