ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಮೂನ್ ಲೈಟಿಂಗ್ ಇದೀಗ ಸುದ್ದಿ ಮಾಡುತ್ತಿದ್ದು, ಭಾರತ ಮೂಲದ ವ್ಯಕ್ತಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಾ ಬೇರೊಂದು ಸಂಸ್ಥೆಗೆ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ (ಮೂನ್‌ಲೈಟ್) ಭಾರತ ಮೂಲದ 39 ವರ್ಷದ ವ್ಯಕ್ತಿಯನ್ನು ‘ಮಹಾ ದ್ರೋಹ’ ಎಂದು ಕರೆದಿರುವ ಅಲ್ಲಿನ ನ್ಯಾಯಾಲಯ, 15 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಭಾರತ ಮೂಲದ ನೌಕರ ಮೆಹುಲ್ ಗೋಸ್ವಾಮಿ ಶಿಕ್ಷೆಗೆ ಗುರಿಯಾದ ನೌಕರನಾಗಿದ್ದು, ಒಂದು ಉದ್ಯೋಗದ ಗುತ್ತಿಗೆ ಸಕ್ರಿಯವಾಗಿರುವಾಗ ಅದರ ನಿಯಮ ಉಲ್ಲಂಘಿಸಿ ಬೇರೆ ಕೆಲಸ ಮಾಡುವುದು ತೆರಿಗೆದಾರರ 50 ಸಾವಿರ ಡಾಲರ್ (43 ಲಕ್ಷ ರೂ) ವಂಚಿಸಿದ ಅಪರಾಧಕ್ಕೆ ಸಮ ಎಂದು ಸರಟೊಗಾ ಕೌಂಟಿ ಶೆರೀಫ್ ಕಚೇರಿಯು ಅಭಿಪ್ರಾಯಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಮೆಹುಲ್ ಗೋಸ್ವಾಮಿ ನ್ಯೂಯಾರ್ಕ್ ನಲ್ಲಿ ಅಲ್ಲಿನ ರಾಜ್ಯ ಸರ್ಕಾರಿ ಸ್ವಾಮ್ಯದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಬೇರೊಂದು ಖಾಸಗಿ ಕಂಪನಿಯಲ್ಲಿ (ಗ್ಲೋಬಲ್ ಫೌಂಡರೀಸ್) ಕಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.ನ್ಯೂಯಾರ್ಕ್ ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ 50 ಸಾವಿರ ಡಾಲರ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪಗಳಿದ್ದು ತನಿಖೆಯಲ್ಲಿ ಹಾಗೂ ವಿಚಾರಣೆಯಲ್ಲಿ ಆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಗೋಸ್ವಾಮಿಗೆ ಶಿಕ್ಷೆ ವಿಧಿಸಲಾಗಿದೆ.
ಮೆಹುಲ್ ಗೋಸ್ವಾಮಿ ಅವರು ಮನೆಯಿಂದಲೇ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಗೆ ಕೆಲಸ ಮಾಡುತ್ತಿದ್ದರು. ಇದು ಅವರ ಪ್ರಾಥಮಿಕ ಉದ್ಯೋಗವಾಗಿತ್ತು. ಆದರೆ, ಅದೇ ವೇಳೆಗೆ ಮಾಲ್ಟಾದಲ್ಲಿರುವ ಗ್ಲೋಬಲ್‌ಫೌಂಡ್ರೀಸ್ ಎಂಬ ಸೆಮಿ ಕಂಡಕ್ಟರ್ ಕಂಪನಿಗೂ 2022ರಿಂದ ಕೆಲಸ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸರ್ಕಾರಿ ಕಚೇರಿಗೆ ಬಂದ ಅನಾಮದೇಯ ಇ-ಮೇಲ್ ಒಂದು ಮೆಹುಲ್ ಅವರ ಕಳ್ಳಾಟ ಬಯಲು ಮಾಡಿತ್ತು. ಸರ್ಕಾರಿ ನೌಕರನಾಗಿ ಕೆಲಸ ಮಾಡಬೇಕಾದ ಅವಧಿಯಲ್ಲೇ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದ ವಿವರ ಅದರಲ್ಲಿತ್ತು.
ಈ ಪ್ರಕರಣ ಸಂಬಂಧ ಅ. 15ರಂದು ಗೋಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಇವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ 15 ವರ್ಷಗಳ ಶಿಕ್ಷೆಗೆ ಇವರು ಗುರಿಯಾಗಿದ್ದಾರೆ. ಮೆಹುಲ್ ಅವರು 2024ರಲ್ಲಿ ಸರ್ಕಾರಿ ಕಚೇರಿಯಿಂದ 1.17 ಲಕ್ಷ (1.03ಕೋಟಿ ರೂ) ಅಮೆರಿಕನ್ ಡಾಲರ್ ಗಳಿಸಿದ್ದಾರೆ.

