ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಯಾಬಿಟಿಸ್ ಇರುವವರಿಗೆ ಕೆಎಂಎಫ್ ದೀಪಾವಳಿ ಉಡುಗೊರೆ ನೀಡಲಿದೆ. ಮಧುಮೇಹಿಗಳಿಗೆಂದೇ ನಂದಿನಿ ಬ್ರ್ಯಾಂಡ್ನಲ್ಲಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಆರೋಗ್ಯ ಕಾಳಜಿಯ ಹಬ್ಬದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿ ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.
ಆರೋಗ್ಯದ ಬಗ್ಗೆ ಜನ ಹೆಚ್ಚಿನ ಕಾಳಜಿ ವಹಿಸಬೇಕಾದ ಈ ಕಾಲದಲ್ಲಿ, ಗ್ರಾಹಕರು ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಸಕ್ಕರೆ ರಹಿತ ನಂದಿನಿ ಸಿಹಿತಿಂಡಿಗಳು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿರುವುದರಿಂದ ನಾವು ಈ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಕ್ಕರೆ ಬಳಕೆ ಮಾಡದೆಯೇ ಆರೋಗ್ಯಕರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ಶಿವಸ್ವಾಮಿ ಹೇಳಿದ್ದಾರೆ.
ಹಬ್ಬದ ಕೊಡುಗೆಯ ಭಾಗವಾಗಿ, ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್ ಜಾಮೂನ್ 500 ಗ್ರಾಂ ಪ್ಯಾಕ್‌ಗೆ 220 ರೂ., ಶುದ್ಧ ನಂದಿನಿ ಹಳೆ ಪೇಡಾ (ಸಕ್ಕರೆ ರಹಿತ) 200 ಗ್ರಾಂಗೆ 170 ರೂ. ಮತ್ತು ಬೆಲ್ಲದಿಂದ ತಯಾರಿಸಿದ ನಂದಿನಿ ಬೆಲ್ಲ ಓಟ್ಸ್ ಮತ್ತು ಬೀಜಗಳ ಬರ್ಫಿ 200 ಗ್ರಾಂಗೆ 170 ರೂ. ಬೆಲೆಗೆ ಲಭ್ಯವಿದೆ ಎಂದು ಕೆಎಂಎಫ್ ತಿಳಿಸಿದೆ. ಈ ಉತ್ಪನ್ನಗಳು ಶುದ್ಧ, ರುಚಿಕರ ಮತ್ತು ಕೈಗೆಟುಕುವ ಬೆಲೆಯಲ್ಲಿದ್ದು ಗುಣಮಟ್ಟದ ವಿಚಾರದಲ್ಲಿ ನಂದಿನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಶಿವಸ್ವಾಮಿ ಹೇಳಿದ್ದಾರೆ.
ದಸರಾ ಹಬ್ಬದ ಸಮಯದಲ್ಲಿ, ನಂದಿನಿ ಸಿಹಿ ಉತ್ಪನ್ನಗಳ ಮಾರಾಟವು 750 ಮೆಟ್ರಿಕ್ ಟನ್‌ಗಳನ್ನು ದಾಟಿದೆ. ಇದು ಬ್ರ್ಯಾಂಡ್‌ನ ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ಗ್ರಾಹಕರ ನಿರಂತರ ನಂಬಿಕೆಗೆ ಸಾಕ್ಷಿ ಎಂದು ಕೆಎಂಎಫ್ ಹೇಳಿದೆ.

